ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಮುಜರಾಯಿ ಇಲಾಖೆಯಿಂದ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ ನಾಲ್ಕನೇ ರೈಲಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆ ರೈಲು ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ದರ್ಶನ ಮಾಡಲಿರುವ ಯಾತ್ರ್ರಿಗಳನ್ನು ಕರೆದೊಯ್ಯಲಿದೆ.
ಒಟ್ಟು 8 ದಿನಗಳ ಕಾಶಿ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ರೂ. ಸರ್ಕಾರದಿಂದ ಸಿಗಲಿದೆ. ಅಂದರೆ ಒಬ್ಬರಿಗೆ 15 ಸಾವಿರ ರೂ. ಖರ್ಚು ಪ್ರಯಾಣಿಕರಿಗೆ ಬರಲಿದೆ. ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. 700 ಸೀಟ್ ಸಾಮರ್ಥ್ಯ ಹೊಂದಿರುವ ರೈಲಿನಲ್ಲಿ ಸದ್ಯ 403 ಸೀಟ್ ಬುಕ್ಕಿಂಗ್ ಆಗಿವೆ.
ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತಲುಪಲು ಎರಡು ದಿನ ಆಗಲಿದೆ. ವಾರಣಾಸಿಗೆ ತಲುಪಿದ ಬಳಿಕ ಗಂಗಾ ಸ್ನಾನ, ತುಳಸಿ ಮಂದಿರ ದರುಶನ, ಶ್ರೀ ಹನ್ಮಾನ್ ದರುಶನ, ಕಾಶಿ ವಿಶ್ವನಾಥ ದರುಶನ, ಪಡೆದ ಬಳಿಕ ಒಂದು ದಿನ ಕಾಶಿಯಲ್ಲಿ ತಂಗುವುದು. ಬಳಿಕ 5ನೇ ದಿನ ವಾರಣಾಸಿಯಿಂದ ಆಯೋಧ್ಯೆಗೆ ತೆರಳುವುದು. ಇಲ್ಲಿ ಶ್ರೀರಾಮ ಭೂಮಿ ದರುಶನ, ಮಾಡಿ, ಸಂಜೆ ಸರಾಯು ಆರತಿ ವೀಕ್ಷಣೆ ಮಾಡುವುದು. ಸಂಜೆಯ ಬಳಿಕ ಪ್ರಯಾಗ್ ರಾಜ್‍ಗೆ ಪ್ರಯಾಣ, 6ನೇ ದಿನ ಪ್ರಯಾಗ್ ರಾಜ್ ತಲುಪುವ ರೈಲು ತಲುಪಲಿದೆ. ಬಳಿಕ ತ್ರಿವೇಣಿ ಸಂಗಮ ಸ್ನಾನ, ಶ್ರೀ ಹನುಮಾನ್ ಮಂದಿರ ದರುಶನ, ಇರಲಿದೆ. ಬಳಿಕ ಅದೇ ದಿನ ಪ್ರಯಾಗ್ ರಾಜ್‍ನಿಂದ ಬೆಂಗಳೂರಿಗೆ ರೈಲು ಹೊರಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಹಿಂದೆ ಮೂರು ಟ್ರಿಪ್ ಆಗಿದೆ. ಇದು ನಾಲ್ಕನೇ ಟ್ರಿಪ್, ಈ ಬೋಗಿಗಳು ರಾಜ್ಯ ಸರ್ಕಾರದ್ದಾಗಿದ್ದು, ರಾಜ್ಯ ಸರ್ಕಾರವೇ ಹಣ ಕೊಟ್ಟು ಮಾಡಿಸಿದೆ. ಮುಂದೆ ಬೇರೆ ಭಾಗಗಳಿಗೂ ಈ ಬೋಗಿಗಳನ್ನು ಬಳಕೆ ಮಾಡಲಾಗುತ್ತದೆ. ಪ್ರವಾಸದ ವೇಳೆ ಊಟದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳಾಗಿವೆ. ರೈಲಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರಲಿದ್ದಾರೆ. ಆಗಸ್ಟ್ 15ಕ್ಕೆ ಮತ್ತೆ 5ನೇ ಕಾಶಿಯಾತ್ರೆ ಆರಂಭವಾಗಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಎಲ್ಲೆಲ್ಲಿ ನಿಲ್ದಾಣಗಳಿವೆ
ಯಶವಂತಪುರ, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗದಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.