ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ʼಕರ್ನಾಟಕ ಸಂಭ್ರಮ 50ʼ (Karnataka Sambhrama) ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ʼಕರ್ನಾಟಕ ಸಂಭ್ರಮ-50ರ ಲಾಂಛನವನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ನಾವೆಲ್ಲರೂ ಕನ್ನಡಿಗರು, ಕರ್ನಾಟಕದ ಏಕೀಕರಣವಾದಾಗಿನಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ಕನ್ನಡ ನಾಡಿನಲ್ಲಿ ನೆಲೆಸಿದ್ದಾರೆ ಎಂದರು.
ಈ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆ ಮಾತನಾಡುವುದನ್ನು ಕಲಿಯಬೇಕು. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಅಲ್ಲಿನ ಭಾಷೆ ಕಲಿಯದೇ ಕನ್ನಡ ಮಾತನಾಡಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಬಾರದೇ ಇದ್ದರೂ ಬದುಕಬಹುದು. ಇದೇ ನಮ್ಮ ರಾಜ್ಯಕ್ಕೂ ಹಾಗೂ ಪಕ್ಕದ ರಾಜ್ಯಗಳಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.
ಕನ್ನಡಿಗರಲ್ಲಿ ಔದಾರ್ಯ ಹೆಚ್ಚು: ಕರ್ನಾಟಕದ ಏಕೀಕರಣವಾಗಿ 68 ವರ್ಷಗಳು ಸಂದರೂ ರಾಜ್ಯದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಕನ್ನಡಿಗರು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸುವ ಬದಲು, ಅವರ ಭಾಷೆಯನ್ನೇ ನಾವು ಮೊದಲು ಕಲಿಯುತ್ತಿದ್ದೇವೆ. ಕನ್ನಡಿಗರ ಈ ವರ್ತನೆ ಭಾಷಾ ಬೆಳವಣಿಗೆ ಹಾಗೂ ನಾಡು, ನುಡಿ, ಸಂಸ್ಕೃತಿ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಲ್ಲಿ ಪರಭಾಷಿಗರು ಕನ್ನಡವನ್ನು ಮಾತನಾಡುವುದೇ ಇಲ್ಲ. ಕನ್ನಡಿಗರು ಅಭಿಮಾನ ಶೂನ್ಯರಲ್ಲ. ಆದರೆ ಹೆಚ್ಚಿನ ಉದಾರತೆಯಿಂದಾಗಿ ಈ ರೀತಿ ಆಗಿದೆ. ಬೇರೆ ಭಾಷಿಗರನ್ನು, ಧರ್ಮದವರನ್ನೂ ಪ್ರೀತಿಸಬೇಕು. ಆದರೆ ನಮ್ಮ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಏಕೀಕರಣವಾದದ್ದು 1956ರ ನವೆಂಬರ್ 1 ರಂದು. ಕರ್ನಾಟಕ ಏಕೀಕರಣಕ್ಕೂ ಮುನ್ನ ಅನೇಕ ರಾಜ್ಯಗಳಲ್ಲಿ ಕನ್ನಡ ನಾಡು ಹರಿದು ಹಂಚಿಹೋಗಿದ್ದವು. ಭಾಷಾವಾರು ಪ್ರಾಂತ್ಯ ವಿಂಗಡನೆ ಘೋಷಣೆಯಾದ ಮೇಲೆ ಕರ್ನಾಟಕ ಏಕೀಕರಣವಾಗಬೇಕೆಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಅನೇಕರು ಏಕೀಕರಣಕ್ಕಾಗಿ ಹೋರಾಟ ಮಾಡಿದರು. ಸಾಂಪ್ರದಾಯಿಕವಾಗಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದರೂ ಮೈಸೂರು ರಾಜ್ಯವೆಂದೇ ಕರೆಯಲಾಗುತ್ತಿತ್ತು. ಮೈಸೂರು ರಾಜವಂಶಸ್ಥರು ಆಳಿದ್ದರಿಂದ ಆ ಹೆಸರಿತ್ತು. ವಿಶಾಲ ಕರ್ನಾಟಕವಾದ ನಂತರ ಮುಂಬೈ ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಹಲವು ಪ್ರದೇಶಗಳು ಒಗ್ಗೂಡಿ ಕರ್ನಾಟಕವಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1973, ನವೆಂಬರ್ 01 ರಂದು ಕರ್ನಾಟಕ ಎಂದು ಮರುನಾಮಕರಣವಾಯಿತು. ‘ಕರ್ನಾಟಕ ಗತವೈಭವ’ ಎಂಬ ಆಲೂರು ವೆಂಕಟರಾಯರ ಪುಸಕ್ತದಿಂದ ಆಯ್ದು ಅಖಂಡ ಕರ್ನಾಟಕಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ವಿವರಿಸಿದರು.
ನವೆಂಬರ್ 01, 2023ಕ್ಕೆ 50 ವರ್ಷಗಳು ತುಂಬುತ್ತದೆ. ವಾಸ್ತವವಾಗಿ ಕಳೆದ ವರ್ಷವೇ ಆಚರಿಸಬೇಕಿತ್ತು. ಆದರೆ ಈ ಬಾರಿಯ ಬಜೆಟ್ನಲ್ಲಿ ಘೋಷಣೆ ಮಾಡಿ 2023 ನವೆಂಬರ್ 1 ರಿಂದ 2024 ನವೆಂಬರ್ 1 ರವರೆಗೆ ವರ್ಷವಿಡೀ ಕರ್ನಾಟಕ ಸಂಭ್ರಮವನ್ನು ಆಚರಿಸಲಾಗುತ್ತಿದೆ.