ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಲವು ಸಚಿವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ನಿನ್ನೆ ರಾತ್ರಿ ದೆಹಲಿಯಲ್ಲಿ ಚರ್ಚೆ ನಡೆಸಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಟಿಬಿ ಜಯಚಂದ್ರ, ಸಂಸದ ಡಿಕೆ ಸುರೇಶ್, ಸಂಸದ ಜಿಸಿ ಚಂದ್ರಶೇಖರ್ ಅವರು ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ತಮಿಳುನಾಡು ಮತ್ತು ಕರ್ನಾಟಕ ನಡುವೆ ನಡೆಯುತ್ತಿರುವ ಕಾವೇರಿ ನೀರಿನ ಸಮಸ್ಯೆ ಕುರಿತು ಚರ್ಚಿಸಿದರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಂಗಳವಾರ ತಡರಾತ್ರಿ ದೆಹಲಿ ತಲುಪಿದ್ದಾರೆ. ಇಂದು ನಡೆಯಲಿರುವ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯದ ಸಂಸದರು ಮತ್ತು ಸಚಿವರು ಭಾಗವಹಿಸಲಿದ್ದಾರೆ. ಕಾವೇರಿ ವಿವಾದದ ಜೊತೆಗೆ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ರಾಜ್ಯದ ಯೋಜನೆಗಳು ಮತ್ತು ಬರ ಪರಿಹಾರ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ಮಂಗಳವಾರ ಮುಂಜಾನೆ ರಾಜ್ಯ ಜಲಸಂಪನ್ಮೂಲ ಸಚಿವ ದುರೈ ಮುರ್ಗನ್ ನೇತೃತ್ವದ ತಮಿಳುನಾಡು ಸಂಸದರು ಮತ್ತು ಶಾಸಕರ ನಿಯೋಗವು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಶೇಖಾವತ್ ಅವರನ್ನು ಭೇಟಿ ಮಾಡಿ ಸೆಪ್ಟೆಂಬರ್ 26 ರವರೆಗೆ 5000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನ ಕರ್ನಾಟಕ ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ ಎಂದು ತಮಿಳುನಾಡು ಆರೋಪಿಸಿದೆ.
ಕಾವೇರಿ ನದಿ ಎರಡೂ ರಾಜ್ಯಗಳ ಜನರಿಗೆ ಜೀವನಾಧಾರದ ಪ್ರಮುಖ ಮೂಲವಾದ್ದರಿಂದ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ.