ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭಸುದ್ದಿ ಸಿಕ್ಕಿದೆ. ಅದೇನೆಂದರೆ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಪ್ರಸಕ್ತ ಸಾಲಿನಿಂದಲೇ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಈವರೆಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸಲಾಗುತ್ತಿತ್ತು. ಇನ್ಮುಂದೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದ್ದು, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ ಮೂರು ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಪರಿಚಯಿಸಲಾಗುವ ಹೊಸ ಪದ್ಧತಿ ಮೂಲಕ ವಿದ್ಯಾರ್ಥಿಗಳಿಗೆ ಮೊದಲ ಪರೀಕ್ಷೆಯಲ್ಲಿ ತೆಗೆದ ಅಂಕಗಳಿಗಿಂತ ಹೆಚ್ಚು ಅಂಕಗಳನ್ನು ಕ್ರಮವಾಗಿ ಮೊದಲ, ಎರಡನೆಯ, ಮೂರನೆಯ ಪರೀಕ್ಷೆಗಳಲ್ಲಿ ತೆಗೆಯುವ ಮೂಲಕ ಅಂಕಗಳನ್ನು ಸುಧಾರಿಸಲು ಸಹಾಯವಾಗಲಿದೆ.
ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಶೈಲಿಯು ವಿಭಿನ್ನವಾಗಿದೆ. 1, 2 ಮತ್ತು 3 ಪರೀಕ್ಷೆಗಳನ್ನು ನಡೆಸುವುದರಿಂದ ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ಮಿತಿಯಿಂದ ಉಂಟಾಗುವ ಒತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪೂರಕಪರೀಕ್ಷೆ ಎಂಬ ಹೆಸರಿನ ಬದಲಿಗೆ ವಾರ್ಷಿಕ ಪರೀಕ್ಷೆ 1, 2 ಮತ್ತು 3 ಎಂದು ಹೆಸರಿಸುವುದರೊಂದಿಗೆ ಮೂರು ಅವಕಾಶಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಯ ಒಟ್ಟಾರೆ ಕಾರ್ಯಕ್ಷಮತೆಯನ್ನು ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಪರೀಕ್ಷಾ ವೇಳಾಪಟ್ಟಿ
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ-1 ಮಾರ್ಚ್ 1ರಿಂದ ಮಾರ್ಚ್ 25ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-2 ಮೇ 15ರಿಂದ ಜೂನ್ 5ರವರೆಗೆ ನಡೆಸಲು ತೀರ್ಮಾನ
ಪರೀಕ್ಷೆ-3 ಜುಲೈ 12ರಿಂದ ಜುಲೈ 30ರವರೆಗೆ ನಡೆಸಲು ನಿರ್ಧಾರ
10ನೇ ತರಗತಿ ಪರೀಕ್ಷಾ ವೇಳಾಪಟ್ಟಿ
ಪರೀಕ್ಷೆ-1 ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-2 ಜೂನ್ 12ರಿಂದ ಜೂನ್ 19ರವರೆಗೆ
ಪರೀಕ್ಷೆ-3 ಜುಲೈ 29ರಿಂದ ಆಗಸ್ಟ್ 5ರವರೆಗೆ ನಡೆಸಲು ತೀರ್ಮಾನ