ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿನ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ನೀಡಿದ ಜಾಹೀರಾತುಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಏಕೆಂದರೆ, ಅವುಗಳಲ್ಲಿ ಮತ ಕೇಳಿಲ್ಲ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ನವೆಂಬರ್ 30 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ತೆಲಂಗಾಣದ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಅದೇ ದಿನ ಚುನಾವಣಾ ಆಯೋಗವು ತೆಲಂಗಾಣ ಪತ್ರಿಕೆಗಳಲ್ಲಿ ತನ್ನ ಗ್ಯಾರಂಟಿ ಯೋಜನೆಗಳ ಕುರಿತು ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸೂಚಿಸಿದೆ ಮತ್ತು ಮಾದರಿ ನೀತಿ ಸಂಹಿತೆ (ಎಂಸಿಸಿ) ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದಿದ್ದಕ್ಕಾಗಿ ವಿವರಣೆ ನೀಡುವಂತೆ ಕೇಳಿದೆ.
ಈ ಕುರಿತು ಮಾತನಾಡಿದ ಶಿವಕುಮಾರ್, ಕರ್ನಾಟಕ ಸರ್ಕಾರವು ತನ್ನ ಯಾವುದೇ ‘ಖಾತರಿ ಯೋಜನೆ’ಗಳನ್ನು ಅನುಷ್ಠಾನಗೊಳಿಸಿಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆಗಳ ನಡುವೆ ರಾಜ್ಯ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳುವ ಗುರಿಯನ್ನು ಮಾತ್ರ ಜಾಹೀರಾತುಗಳು ಹೊಂದಿವೆ ಎಂದು ಹೇಳಿದರು.
‘ನಾವು ಯಾವುದೇ ಉಲ್ಲಂಘನೆ ಮಾಡಿಲ್ಲ; ಕರ್ನಾಟಕ ಸರ್ಕಾರ ಯಾರನ್ನೂ ಮತ ಕೇಳಿಲ್ಲ ನಾವು ಯಾವ ಉಲ್ಲಂಘನೆ ಮಾಡಿದ್ದೇವೆ?’ ಎಂದು ಚುನಾವಣಾ ಆಯೋಗದ ನಿರ್ದೇಶನಗಳ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
‘ನಾವು ಯಾವುದೇ ಕೆಲಸ ಮಾಡಿದ್ದರೂ, ಅವುಗಳನ್ನು ವಿವಿಧ ರಾಜ್ಯಗಳಿಗೆ ಪ್ರಸ್ತುತಪಡಿಸಿದ್ದೇವೆ. ಕರ್ನಾಟಕ, ತಮಿಳುನಾಡು ಅಥವಾ ತೆಲಂಗಾಣದಲ್ಲಿ ಪತ್ರಿಕೆ ಓದುಗರಿಗೆ ಅವುಗಳ ಬಗ್ಗೆ ತಿಳಿಸಿದ್ದೇವೆ.ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಸಮರ್ಥಿಸಿಕೊಂಡರು.