ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರವಾನಗಿ ಪಡೆಯದೆ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಯುಎಸ್ ಜೊತೆಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸಲಾಗಿದೆ ಎಂಬ ಆರೋಪಕ್ಕೆ ಇ.ಡಿ ಗೂಗಲ್ ಇಂಡಿಯಾಗೆ ₹ 5.25 ಕೋಟಿ ದಂಡ ವಿಧಿಸಿತ್ತು.
ಈ ಆದೇಶಕ್ಕೆ ದೆಹಲಿಯ ಮೇಲ್ಮನವಿ ಪ್ರಾಧಿಕಾರ ತಡೆ ನೀಡಿದ್ದು, ಈಗ ತಡೆ ಆದೇಶದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು, ಆರ್‌ಬಿಐ ಮತ್ತು ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆಯದೇ ತನ್ನ ಮಾತೃ ಸಂಸ್ಥೆಗಳಾದ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಯುಎಸ್‌ಗಳ ಜಾಹೀರಾತುಗಳನ್ನು ಅಕ್ರಮವಾಗಿ ಪ್ರಕಟಿಸಿತ್ತು. ಈ ಮೂಲಕ ₹ 365.59 ಕೋಟಿ ವ್ಯವಹಾರ ನಡೆಸಿದೆ ಎಂದು ಆರೋಪಿಸಿ ಗೂಗಲ್ ಇಂಡಿಯಾ ಸಂಸ್ಥೆಗೆ ಬೆಂಗಳೂರು ವಲಯದ ಇ.ಡಿ ಉಪ ನಿರ್ದೇಶಕರು ₹5.25 ಕೋಟಿ ದಂಡ ವಿಧಿಸಿ ಆದೇಶಿಸಿದ್ದರು.
ಗೂಗಲ್ ಇಂಡಿಯಾದ ಪ್ರತಿನಿಧಿಗಳು ದಂಡದ ಮೊತ್ತದಲ್ಲಿ ಶೇ 50ರಷ್ಟು ಮೊತ್ತಕ್ಕೆ ಮುಂದಿನ ಎರಡು ವಾರಗಳಲ್ಲಿ ಬ್ಯಾಂಕ್ ಗ್ಯಾರಂಟಿ ಒದಗಿಸಬೇಕು. ಈ ಗ್ಯಾರಂಟಿಯನ್ನು ಅರ್ಜಿ ಇತ್ಯರ್ಥವಾಗುವವರೆಗೂ ಉಳಿಸಿಕೊಳ್ಳಬೇಕು. ಅಂತೆಯೇ, ಗೂಗಲ್ ನೀಡುವ ಗ್ಯಾರಂಟಿ ಅರ್ಜಿ ಕುರಿತಂತೆ ಹೈಕೋರ್ಟ್ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.