ಹೊಸದಿಗಂತ ವರದಿ, ಮೈಸೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ರಾಜ್ಯದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ರಾಜ್ಯ ಸರ್ಕಾರದ ಬೇಜವಾಬ್ದಾರಿತನದ ಆಡಳಿತದಿಂದಾಗಿ ಕರ್ನಾಟಕ ಮತ್ತೊಂದು ಬಿಹಾರ ರಾಜ್ಯವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ಭಾನುವಾರ ನಗರದ ಬೋಗಾದಿಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಪ್ರಮುಖರ ಹಾಗೂ ಮತದಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಆಡಳಿತದಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ದಾವಣಗೆರೆ ಚೆನ್ನಗಿರಿಯಲ್ಲಿ ಪೊಲೀಸ್ ಮೇಲೆ ಹಲ್ಲೆ ನಡೆಸಿ ಠಾಣೆಯನ್ನು ಧ್ವಂಸ ಮಾಡಿದ್ದಾರೆ, ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಎರಡು ತಿಂಗಳಿoದ ಹತ್ಯೆಗಳು ಹೆಚ್ಚಾಗಿವೆ. ಯುವತಿಯರು, ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಪೋಟವಾಗಿದೆ. ಇದನ್ನೆಲ್ಲ ನೋಡಿದರೆ ರಾಜ್ಯದಲ್ಲಿ ಕಾನಾನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಿಎಂ ಗೃಹ ಸಚಿವರು ಇದ್ದಾರಾ ಅನ್ನಿಸುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಲಾಲು ಪ್ರಸಾದ್ ಯಾದವ್ ಅವರ ಆಡಳಿತದ ಬಿಹಾರ ರಾಜ್ಯ ನೆನಪಾಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಂಟಕ ತಂದಿಟ್ಟಿದ್ದಾರೆ. ಒಳ್ಳೆಯ ಕೆಲಸಗಳನ್ನ ಮಾತ್ರ ಮಾಡಲಿಕ್ಕೆ ಆಗಿಲ್ಲ. ಯುವಕರ ಭವಿಷ್ಯಕ್ಕೆ ಮೋದಿಯವರು ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರು,ಆದರೆ ಕಾoಗ್ರೆಸ್ ಸರ್ಕಾರ ಬಂದ ಒಂದೇ ತಿಂಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದಿದ್ದಾರೆ. ಇದು ಅಸಮರ್ಥ ಸರ್ಕಾರ ಎಂದು ಗೊತ್ತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಶಿಕ್ಷಣ ಸಚಿವರ ಕನ್ನಡದ ಬಗ್ಗೆ ಹಲವರು ಮಾತನಾಡಿದ್ದಾರೆ. ಶಿಕ್ಷಣ ಸಚಿವರಿಗೆ ಕನ್ನಡ ಬರಲೇಬೇಕಾ ಎಂದು ಬೇಕಿದ್ರೆ ಸಿಎಂ ಸಮರ್ಥನೆ ಮಾಡಿಕೊಳ್ಳಬಹುದು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಹೋಗಬೇಕಿದೆ. ದೇಶದಲ್ಲಿ ಮೋದಿ ಪ್ರಧಾನಿ ಮಂತ್ರಿಯಾಗಬೇಕು ಎಂಬುದಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಮೈಸೂರು-ಕೊಡಗು ಲೋಕಸಭೆ ಚುನಾವಣೆಯಲ್ಲಿ ಯದುವೀರ್ ಪರವಾಗಿ ಬಿಜೆಪಿ ನಾಯಕರ ಜೊತೆಗೆ ಜೆಡಿಎಸ್ ನಾಯಕರೂ ಶ್ರಮಿಸಿದ್ದಾರೆ. ಫಲಿತಾಂಶವನ್ನು ನಾವು ಎದುರು ನೋಡುತ್ತಿದ್ದೇವೆ. ಕಾಂಗ್ರೆಸ್ ನವರು ದುರಾಡಳಿತ, ಅಧಿಕಾರ ದುರಪಯೋಗ, ಹಣದ ಮೂಲಕ ಚುನಾವಣೆ ಗೆಲ್ಲುತ್ತೇವೆ ಎಂದು ಭ್ರಮೆಯಲ್ಲಿದ್ದಾರೆ. ಅದನ್ನ ರಾಜ್ಯದ ಜನ ಸುಳ್ಳು ಮಾಡಲಿದ್ದಾರೆ. ವಿಧಾನಪರಿಷತ್‌ನ ೬ ಕ್ಷೇತ್ರಗಳ ಪೈಕಿ ಬಿಜೆಪಿ ನಾಲ್ಕು, ಜೆಡಿಎಸ್ ೨ ರಲ್ಲಿ ಸ್ಪರ್ಧೆ ಮಾಡಿದೆ. ನಮ್ಮ ಪಕ್ಷದಲ್ಲೂ ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಅವರು ಕೂಡ ಇಂದು ವಿವೇಕಾನಂದ ಪರವಾಗಿ ನಿಂತಿದ್ದಾರೆ. ಪಕ್ಷ ನಿರ್ಧಾರ ಮಾಡಿದ ಮೇಲೆ ಅವರ ಗೆಲುವಿಗಾಗಿ ನಾವು ದುಡಿಯಬೇಕು.
ಶೈಕ್ಷಣಿಕ ಕ್ಷೇತ್ರದ ಪಾವಿತ್ರ್ಯವನ್ನು ಕಲುಷಿತಗೊಳಿಸಿ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಕೆ.ವಿವೇಕಾನಂದ ಅವರನ್ನು ಪ್ರಥಮ ಪ್ರಾಶಸ್ತ್ಯ ಮತಗಳಿಂದ ಗೆಲ್ಲಿಸಲು ಶ್ರಮಿಸಬೇಕು. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಜೆಡಿಎಸ್ ಪರಸ್ಪರ ಸಹಕಾರದಿಂದ ಯಶಸ್ವಿಯಾಗಿ ಚುನಾವಣೆ ಎದುರಿಸಿದ್ದೀರಿ. ಮುಂದೆಯೂ ಒಟ್ಟಾಗಿ ಹೋಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜೆಡಿಎಸ್‌ನ ಕೋರ್ ಕಮಿಟಿಯ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಸಂಸದ ವಿಜಯ್ ಶಂಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇoದ್ರ, ಓಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ಆರ್ ರಘು ಕೌಟಿಲ್ಯ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್, ಪ್ರಭಾರಿ ಮೈ.ವಿ ರವಿಶಂಕರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ತೋಂಟದಾರ್ಯ, ಮಾಜಿ ಮೇಯರ್‌ಗಳಾದ ಶಿವಕುಮಾರ್, ಸಂದೇಶ್ ಸ್ವಾಮಿ, ಆರ್ ಲಿಂಗಪ್ಪ, ಎಂ.ಜೆ.ರವಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಬಿ.ಎಂ ರಘು, ಹೆಚ್.ಜಿ. ಗಿರಿಧರ್, ಗ್ರಾಮಾಂತರ ಪ್ರಧಾನಕಾರ್ಯದರ್ಶಿಗಳಾದ ಕಿರಣ್ ಜಯರಾಮ್ ಗೌಡ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.