Friday, September 12, 2025

ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತ ಕರ್ನಾಟಕದ ಸಂಸದರು: ಕೃಷಿ ಸಚಿವರಲ್ಲಿ ಸಮಸ್ಯೆ ತ್ವರಿತ ಇತ್ಯರ್ಥಕ್ಕೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಅಡಿಕೆಗೆ ಕೊಳೆ ರೋಗ ಹರಡಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಮನಗಂಡು ಕರ್ನಾಟಕ ಬಿಜೆಪಿ ಸಂಸದರು ಇಂದು (ಆಗಸ್ಟ್ 21) ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ.

ವಿ ಸೋಮಣ್ಣ ನೇತೃತ್ವದ ಕರ್ನಾಟಕ ಸಂಸದರ ನಿಯೋಗವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆದೊಯ್ದ ಕೃಷಿ ಸಚಿವರನ್ನು ಭೇಟಿ ಮಾಡಿಸಿದ್ದು, ಈ ವೇಳೆ ಅಡಿಕೆ ಬೆಳಗಾರರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿವರವಾದ ಮಾಹಿತಿಯನ್ನು ತಾಳ್ಮೆಯಿಂದ ಆಲಿಸಿದ ಕೃಷಿ‌ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಡಿಕೆ ರೈತರ ಸಮಸ್ಯೆ ತ್ವರಿತವಾಗಿ‌ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ವಿಜ್ಞಾನಿಗಳ ತಂಡದೊಂದಿಗೆ ಭೇಟಿ ನೀಡಲು ದಿನಾಂಕ ನಿಗದಿ ಮಾಡುವಂತೆ ತಿಳಿಸಿದ್ದಾರೆ.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ , ಇಂದು ಕರ್ನಾಟಕದ ಹಾಗೂ ದೇಶದ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನಿರ್ಮಲ‌ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದೆ. WHO ದಿಂದ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್ ಗೆ ಕಾರಣ ಆಗುತ್ತದೆ ಎಂದು ಹೇಳಿದೆ. ಇದು ಸುಪ್ರೀಂಕೋರ್ಟ್ ಗೆ ಹೋಗಿದ್ದು, ಕೋರ್ಟ್ ಕೇಂದ್ರಕ್ಕೆ ವರದಿ ಕೇಳಿದೆ. ಈ ಹಿನ್ನಲೆ ಅಡಿಕೆ ಅಧ್ಯಯನಕ್ಕೆ ಸರ್ಕಾರ ಸೂಚಿಸಿತು. ಈ ವರದಿ ಶೀಘ್ರ ಕೊಡಬೇಕು ಮತ್ತು ಉನ್ನತ ಸಮಿತಿ ಜೊತೆಗೆ ಒಂದು ಸಭೆ ಏರ್ಪಡಿಸಲು ಮನವಿ ಮಾಡಲಾಗಿದೆ. ಹಳದಿ ಎಲೆ ರೋಗ, ಎಲೆ ಚುಕ್ಕೆ ರೋಗದ ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಹಳದಿ ಎಲೆ ರೋಗ ಬಂದರೆ ಆ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆಯಲು ಸಾಧ್ಯವಿಲ್ಲ. ಪೂರ್ಣ ಪ್ರಮಾಣದಲ್ಲಿ ಅಡಿಕೆ ಬೆಳಯಲು ಎಲ್ಲಿ ಸಾಧ್ಯವಾಗುತ್ತಿಲ್ಲ, ಅದಕ್ಕೆ ಪರಿಹಾರ ಹೇಗೆ ಕೊಡಬಹುದು? ಹಾಗೂ ಹಳದಿ ಎಲೆ ರೋಗಕ್ಕೆ ಔಷಧಿ ಬೇಕಿದೆ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಳಿಕೊಂಡಿದ್ದೇವೆ/ ಈ ಬಗ್ಗೆ ಶಿವರಾಜ್ ಸಿಂಗ್ ಚೌಹಾನ್ ಸಹ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಅಡಿಕೆಗೆ 11% ಮಾಯಿಷರ್ ಇದ್ದೇ ಇರುತ್ತೆ. ಸದ್ಯ ಅದು 7% ಇದೆ. ಇದು ಸಾಧ್ಯವಿಲ್ಲ. ಹೀಗಾಗಿ ಇದನ್ನು 11% ಹೆಚ್ಚಿಸಿ ಬೆಲೆ ಸರಿಯಾಗಿ ನೀಡಲು ಕೇಳಿದೆ. ಅಡಿಕೆ ಸೈಜ್ ನಿಂದ ದರದಲ್ಲಿ ವ್ಯತಾಸವಾಗುತ್ತಿದೆ. ಇದು ಆಗಬಾರದು ಎಂದು ಮನವಿ ಮಾಡಲಾಗಿದೆ. ಅಡಿಕೆಗೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. 5% ಜಿಎಸ್ಟಿ ಇದೆ. ಇದನ್ನು ಕಡಿಮೆ ಇದನ್ನು ತೆರವು ಮಾಡಲು ಮನವಿ ಮಾಡಿದ್ದೇವೆ. ಅಡಿಕೆ ಕುಯ್ಲುಗೆ ಕಾರ್ಮಿಕರ ಸಮಸ್ಯೆಯಾಗಿದೆ. ಅದಕ್ಕೆ ಫೈಬರ್ ದೋಟಿ ಗೆ 48% ಕಸ್ಟಮ್ಸ್ ಇದೆ. ಅದನ್ನು ಕಡಿಮೆ ಮಾಡಲು ಮನವಿ ಮಾಡಲಾಗಿದೆ. ಅಡಿಕೆ ಕೊಳೆ ರೋಗಕ್ಕೆ ಬಳಕೆಯಾಗುವ ಕಾಪರ್ ಸಲ್ಫೇಟ್ ಗೆ 18% ಜಿಎಸ್‌ಟಿ ಇದೆ ಅದನ್ನು 5% ಇಳಿಕೆಗೆ ಕೇಳಲಾಗಿದೆ ಎಂದು ಮಾಹಿತಿ ನೀಡಿದರು.

ಬ್ಯಾಂಕುಗಳಲ್ಲಿ ಇರುವ ಸಾಲ ಸೌಲಭ್ಯ ಹೆಚ್ಚಿಸಬೇಕು. ಮತ್ತು ಕಡಿಮೆ ಬಡ್ಡಿ ವಿಧಿಸಲು ಮನವಿ ಮಾಡಲಾಗಿದೆ. ಅಡಿಕೆ ಹಾಳೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ.ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕು. ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಿಂದ ಅಡಿಕೆ ಬೆಳೆಗಾರರಿಗೆ ಅನುಕೂಲ ಆಗುತ್ತಿದೆ. ಆದರೆ ಮಳೆ ಮಾಪನ ಯಂತ್ರಗಳು ಪ್ರತಿ ಪಂಚಾಯತ್ ನಲ್ಲಿರುತ್ತವೆ. ಆದರೆ ರಾಜ್ಯದಲ್ಲಿ 130 ಯಂತ್ರಗಳು ಕೆಟ್ಟು ನಿಂತಿವೆ. ಅದನ್ನು ಸರಿಪಡಿಸಲು, ಮೇಲ್ವಚಾರಣೆ ಮಾಡಲು ಕೇಳಲಾಗಿದೆ. ಮಳೆ ಪ್ರಮಾಣ ದಾಖಲಾದರೆ ಮಾತ್ರ ವಿಮೆ ಕ್ಲೈಮ್ ಮಾಡಬಹುದು ಎಂದರು.

ಇದನ್ನೂ ಓದಿ