March 22, 2026
Sunday, March 22, 2026
spot_img

ಡೀಪ್ ಟೆಕ್ ರಾಜಧಾನಿಯಾಗಲು ಕರ್ನಾಟಕ ಸಿದ್ಧ: ಟೆಕ್ ಸಮಿಟ್‌ನಲ್ಲಿ AIಗೆ ಸಿಂಹಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

28ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ವೆಂಬರ್ 18 ರಿಂದ 20 ರವರೆಗೆ ಇಂಟರ್‌ನ್ಯಾಶನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಸಮಾವೇಶವು ಈ ಬಾರಿ ಡೀಪ್ ಟೆಕ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗಮನ ಸೆಳೆಯುತ್ತಿದೆ.

ವಿಧಾನಸೌಧದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಬೃಹತ್ ಟೆಕ್ ಸಮಿಟ್‌ನಲ್ಲಿ 500ಕ್ಕೂ ಹೆಚ್ಚು ಭಾಷಣಕಾರರು, 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 1 ಸಾವಿರಕ್ಕೂ ಹೆಚ್ಚು ಪ್ರದರ್ಶಕರು ಮತ್ತು 60 ರಾಷ್ಟ್ರಗಳಿಂದ 50 ಸಾವಿರಕ್ಕೂ ಅಧಿಕ ವೀಕ್ಷಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

600 ಕೋಟಿ ಹೂಡಿಕೆ: ಕರ್ನಾಟಕ ಡೀಪ್ ಟೆಕ್ ರಾಜಧಾನಿಯಾಗಲು ಬದ್ಧ

ಕರ್ನಾಟಕವನ್ನು ಭಾರತದ ‘ಡೀಪ್ ಟೆಕ್ ರಾಜಧಾನಿ’ಯಾಗಿ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು 600 ಕೋಟಿ ಹೂಡಿಕೆಗೆ ಬದ್ಧವಾಗಿದೆ. ಈ ಬಂಡವಾಳವನ್ನು AI, ಮಷೀನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ರೋಬೋಟಿಕ್ಸ್ ಮತ್ತು ಸಸ್ಟೇನಬಿಲಿಟಿ ಆಧಾರಿತ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲು ಬಳಸಲಾಗುವುದು.

ಮುಂದಿನ ದಿನಗಳಲ್ಲಿ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳ ಸಹಕಾರದೊಂದಿಗೆ ಈ ನಿಧಿಯನ್ನು 1,000 ಕೋಟಿಗೆ ವಿಸ್ತರಿಸಲು ಸರ್ಕಾರ ಯೋಜಿಸಿದೆ.

ಸ್ಟಾರ್ಟ್‌ಅಪ್‌ಗಳಿಗೆ 353 ಕೋಟಿ ಪ್ರೋತ್ಸಾಹ ನಿಧಿ

ಡೀಪ್ ಟೆಕ್ ಮತ್ತು AI ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು ಮೀಸಲಿಟ್ಟಿರುವ ನಿರ್ದಿಷ್ಟ ನಿಧಿಗಳ ವಿವರವನ್ನು ಸಚಿವರು ನೀಡಿದ್ದಾರೆ:

150 ಕೋಟಿ: ಡೀಪ್ ಟೆಕ್ ಎಲೆವೇಟ್ ಫಂಡ್

80 ಕೋಟಿ: ಎಲೆವೇಟ್ ಬಿಯಾಂಡ್ ಬೆಂಗಳೂರು ಫಂಡ್

75 ಕೋಟಿ: ಕಿಟ್ವಿನ್ ಫಂಡ್ ಮೂಲಕ ಡೀಪ್ ಟೆಕ್ ಮತ್ತು AI ಸ್ಟಾರ್ಟ್‌ಅಪ್‌ಗಳಿಗೆ ಈಕ್ವಿಟಿ ಹೂಡಿಕೆ.

48 ಕೋಟಿ: ಐಐಟಿ ಮತ್ತು ಐಐಐಟಿ ಧಾರವಾಡ ಹಾಗೂ ಕಲಬುರಗಿಯಲ್ಲಿ ಹೊಸ ಇಂಕ್ಯೂಬೇಟರ್‌ಗಳಿಗೆ ಮೀಸಲು.

110 ಕೋಟಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಿಸಿನೆಸ್ ಇಂಕ್ಯೂಬೇಟರ್ ಸ್ಥಾಪನೆಗೆ ಮೀಸಲು.

ಫ್ಯೂಚರ್ ಮೇಕರ್ಸ್ ಕಾಂಕ್ಲೇವ್

ಶೃಂಗಸಭೆಯ ಕೊನೆಯ ದಿನವಾದ ನವೆಂಬರ್ 20 ರಂದು ‘ಫ್ಯೂಚರ್ ಮೇಕರ್ಸ್ ಕಾಂಕ್ಲೇವ್’ ನಡೆಯಲಿದೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಉದ್ಯಮಿಗಳು, ಹೂಡಿಕೆದಾರರು, ಸ್ಟಾರ್ಟ್ ಅಪ್ ಸಂಸ್ಥಾಪಕರು ಮತ್ತು ಆವಿಷ್ಕಾರಕರು ಭಾಗವಹಿಸಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !