2024 ರೊಳಗೆ ಅಮೆರಿಕಾದ ರಸ್ತೆಗಳಿಗೆ ಸಮವಾಗಲಿದೆ ಕರ್ನಾಟಕದ ರಸ್ತೆಗಳು: ಸಾರಿಗೆ ಸಚಿವ ನಿತಿನ್ ಗಡ್ಕರಿ

ಹೊಸದಿಗಂತ ವರದಿ, ಮೈಸೂರು:

ಕರ್ನಾಟಕದಲ್ಲಿನ ರಸ್ತೆಗಳ ಚಿತ್ರಣ ೨೦೨೪ರೊಳಗೆ ಚಿತ್ರಣ ಬದಲಾಗಲಿದ್ದು, ಕರ್ನಾಟಕದ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸಮನಾಗಿ ಇರಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರೂ.೪೦೦೦ ಕೋಟಿಗೂ ಅಧಿಕ ವೆಚ್ಚದ ೨೬೬ ಕಿ.ಮೀ ಉದ್ದದ ೨೨ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿಯು ಉತ್ತಮವಾಗಿದ್ದು, ೪೦೦೦ ಕೋಟಿಯ ಕಾಮಗಾರಿ ನಡೆಯುತ್ತಿದ್ದು, ೨೦೨೪ ರ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ರಾಜ್ಯ ಸರ್ಕಾರದಿಂದ ಇತರೆ ರಸ್ತೆ ಕಾಮಗಾರಿಗಳ ಪ್ರಸ್ತಾವನೆ ನೀಡಿದ್ದು, ಇನ್ನಾವುದೇ ಪ್ರಸ್ತಾವನೆಗಳಿದ್ದರು ಅವುಗಳನ್ನು ನೀಡಿದರೆ ಎಲ್ಲವನ್ನು ಪರಿಶೀಲಿಸಿ ಡಿ ಪಿ ಆರ್ ಮಾಡಲು ಒಪ್ಪಿಗೆ ನೀಡಲಾಗುವುದು ಎಂದರು.

ಕರ್ನಾಟಕ ಸಮೃದ್ಧ ರಾಜ್ಯವಾಗಿದೆ. ಸಾಹಿತ್ಯ, ಕಲೆ, ಸಂಗೀತ ಎಲ್ಲದರಲ್ಲೂ ವಿಶೇಷತೆ ಇದೆ. ಕರ್ನಾಟಕದ ವಿಕಾಸಕ್ಕಾಗಿ ಗ್ರೀನ್ ಎಕ್ಸ್ಪ್ರೆಸ್ ನಿರ್ಮಾಣ ಮಾಡಲಾಗುವುದು. ಬೆಂಗಳೂರು-ಚೆನ್ನೈ ನಡುವೆ ೨೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಕೇವಲ ೨ ಗಂಟೆಯಲ್ಲಿ ಬೆಂಗಳೂರಿನಿoದ ಚೆನ್ನೈ ತಲುಪಬಹುದು ಎಂದರು.

ಬೆoಗಳೂರಿನ ರಿಂಗ್ ರಸ್ತೆ ಮುಖ್ಯ ೨೮೦ ಕಿ.ಮೀ. ರಿಂಗ್ ರಸ್ತೆ ಡಿಸೆಂಬರ್‌ನಲ್ಲಿ ಪೂರ್ಣವಾಗಲಿದೆ. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್ ಮುಕ್ತವಾಗಲಿದೆ ತಿಳಿಸಿದರು.

ಮೈಸೂರು, ಹಾಸನಕ್ಕೆ ರಿಂಗ್ ರಸ್ತೆ ಮಾಡಿಸುತ್ತೇನೆ. ಕುಶಾಲನಗರ- ಮಾಣಿ ರಸ್ತೆಗೆ ಡಿಪಿಆರ್ ಮಾಡಿಸುತ್ತೇವೆ. ಮೈಸೂರು- ನಂಜನಗೂಡು ೬ ಪಥದ ರಸ್ತೆ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಮಂಗಳೂರಿನ ವಿಕಾಸನಕ್ಕೆ ಗ್ರೀನ್ ಎಕ್ಸ್ಪ್ರೆಸ್ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಸಚಿವ ಡಾ.ಎಚ್ ಸಿ ಮಹದೇವಪ್ಪ ಭಾಷಣ ಆರಂಭಿಸುತ್ತಿದ್ದoತೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಹೆಚ್.ಸಿ. ಮಹದೇವಪ್ಪ ನಾನು ಮಾತನಾಡಿದ ನಂತರ ನೀವು ಘೋಷಣೆ ಕೂಗಿ ಎಂದು ಹೇಳಿದರು.

ಬೆಂಗಳೂರು-ಮೈಸೂರು ಹೈವೆ ವಿಚಾರ ಪ್ರಸ್ತಾಪಿಸಿ ಈ ರಸ್ತೆ ನಮ್ಮ ಅವಧಿಯಲ್ಲಿ ಆಯ್ತಾ ಅಥವಾ ನಿಮ್ಮ ಅವಧಿಯಲ್ಲಿ ಆಯ್ತು ಅಂತಾ ನೋಡುವುದಲ್ಲ. ನಾನು ೨೦೧೩ ರ ಅವಧಿಯಲ್ಲಿ ಲೋಕೋಪಯೋಗಿ ಸಚಿವನಾಗಿ ಈ ರಸ್ತೆ ವಿಚಾರವನ್ನು ಗಡ್ಕರಿ ಅವರ ಬಳಿ ಪ್ರಸ್ತಾಪ ಮಾಡಿದ್ದೆ. ನಂತರ ಈಗ ರಸ್ತೆ ಆಗಿದೆ. ಜನರಿಗೆ ಒಳ್ಳೆಯ ಅಭಿವೃದ್ಧಿ ಕಾರ್ಯ ಕೊಡುವುದು ಮುಖ್ಯ. ಆ ಕೆಲಸವನ್ನು ಎಲ್ಲಾ ಪ್ರಜಾಪ್ರಭುತ್ವ ಸರಕಾರಗಳು ಒಟ್ಟಾಗಿ ಸೇರಿ ಮಾಡೋಣ ಎಂದರು.

ಮoಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಾನು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಘೋಷಣೆಗಳು ಜೈಕಾರಗಳು ಮೋದಿಯವರ ಅಭಿವೃದ್ಧಿ ಬಗ್ಗೆ ಮಾತನಾಡುತ್ತವೆ. ದಿನದ ೨೪ ಗಂಟೆ ದೇಶಕ್ಕೋಸ್ಕರ ಕೆಲಸ ಮಾಡುವ ನಾಯಕ. ೨೦೪೭ ಕ್ಕೆ ನಂಬರ್ ೧ ದೇಶ ಆಗಲು ಶ್ರಮಿಸುತ್ತಿರುವ ನಾಯಕ ಎಂದರು.

ನಿತಿನ್ ಗಡ್ಕರಿ ರಸ್ತೆ ಮಾಂತ್ರಿಕ
ನಿತಿನ್ ಗಡ್ಕರಿಯವರು ಕೇವಲ ರಸ್ತೆ ಸಚಿವರಲ್ಲ ರಸ್ತೆ ಮಾಂತ್ರಿಕ. ನನ್ನ ಕ್ಷೇತ್ರದ ಅನೇಕ ಸಮಸ್ಯೆಗಳನ್ನ ತಿಳಿಸಿದಾಗ ಸಹಕಾರ ನೀಡಿರುವಂತಹ ನಾಯಕ. ನನಗೆ ಪಕ್ಷ ಇಲ್ಲ, ಪಕ್ಷೇತರ ಸಂಸದೆ. ಆದರೆ ನನಗೆ ಸಾಕಷ್ಟು ಬೆಂಬಲ ಕೊಟ್ಟು ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ನಮ್ಮ ಮತಗಳು ಯಾವಾಗಲು ಅಭಿವೃದ್ಧಿ ಪರವಾಗಿ ಇರಬೇಕು. ಮುಂದೆಯೂ ಅಭಿವೃದ್ಧಿ ಪರವಾಗಿ ನಮ್ಮ ಮತ ಇರಲಿ ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ಮುನಿಸ್ವಾಮಿ ಪ್ರತಾಪ್‌ಸಿಂಹ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎಚ್.ಡಿ. ರೇವಣ್ಣ, ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ಜಿ.ಡಿ. ಹರೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

  1. ರಸ್ತೆಯ ಮಾಂತ್ರಿಕ ಗಡ್ಕರಿ ಮಂತ್ರಿ ಆದಾ ಮೇಲೆ ಅಂಕೋಲಾ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ದರಿದ್ರ ವಾಗಿದೆ. ಪ್ರತಿ ವರ್ಷ ಕೋಟಿಗಟ್ಟಲೆ ಹಣ ಸುರಿದು ರಿಪೇರಿ ಕೆಲಸ ಮಾಡುವ ನಾಟಕ ಮಾಡುವ ಯೂ tube Hero ಮಂತ್ರಿ ಆದಾ ಮೇಲೆ ಈ ಪರಿಸ್ಥಿತಿ ಯಾರಿಗಾದರೂ ಕಾಣಬಹುದು

LEAVE A REPLY

Please enter your comment!
Please enter your name here

error: Content is protected !!