ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸೈಬರ್ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾಗುತ್ತದೆ. ಹೊಸ ಕಾನೂನು ಅಥವಾ ತಿದ್ದುಪಡಿಯನ್ನು ಮುಂಬರುವ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಪೊಲೀಸ್ ಇಲಾಖೆಯ ದಕ್ಷತೆ ಮತ್ತು ಕೆಲವು ವೈಫಲ್ಯಗಳ ಕುರಿತು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದರು.
ಕರ್ನಾಟಕವನ್ನ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಸರ್ಕಾರ ಪಣತೊಟ್ಟಿದೆ. ಅದಕ್ಕಾಗಿ ವಿಶೇಷ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಸೈಬರ್ ಕ್ರೈಂ, ಡ್ರಗ್ಸ್ ಸಪ್ಲೈ ನಿರ್ಣಾಮ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕೆಲವು ವಿಷಯಗಳಲ್ಲಿ ತಜ್ಞರು, ಹಿರಿಯ ಅಧಿಕಾರಗಳನ್ನ ಅದಕ್ಕಾಗಿಯೇ ನೇಮಕ ಮಾಡಲಾಗಿದೆ. ವಿದೇಶದಿಂದ ಬಂದು ಇಲ್ಲಿ ಡ್ರಗ್ಸ್ ದಂಧೆ ಮಾಡೋರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಂಥವರ ವಿರುದ್ಧ ಅಟೆಂಮ್ಟ್ ಮರ್ಡರ್ ಕೇಸ್ ರೀತಿಯಲ್ಲಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕು.
ಅಲ್ಲದೇ ಪೋಲಿಸರು ಶಿಸ್ತಿನಿಂದ ಕೆಲಸ ಮಾಡಬೇಕು. ಮಹಾರಾಷ್ಟ್ರ ಪೋಲಿಸರು ಬಂದು ಮೈಸೂರು, ಬೆಂಗಳೂರಿನಲ್ಲಿ ಡ್ರಗ್ಸ್ ಸೀಜ್ ಮಾಡಿದ್ರು ಅಂದರೆ ಇದರಲ್ಲಿ ನಮ್ಮ ಪೋಲಿಸರ ವೈಫಲ್ಯ ಎದ್ದುಕಾಣುತ್ತದೆ. ಕೇವಲ ಪೊಲೀಸ್ ಇಲಾಖೆಗೆ ಮಾತ್ರವಲ್ಲ ಸರ್ಕಾರಕ್ಕೂ ಕೂಡ ಇದು ಕೆಟ್ಟ ಹೆಸರು ಬರುತ್ತೆ. ಹಾಗಾಗಿ ಮುಂದೆ ಈ ರೀತಿ ಆಗದಂತೆ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


