ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ2023ರ ಫಲಿತಾಂಶ ಇಂದು ಪ್ರಕಟವಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳನ್ನು ಜೂನ್ 12 ರಿಂದ ಜೂನ್ 19ರ ವರೆಗೆ ನಡೆಸಲಾಗಿತ್ತು. 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 83.89 ರಷ್ಟು ಫಲಿತಾಂಶ ದಾಖಲಾಗಿದ್ದು, ಇದರಲ್ಲಿ ಅನುತ್ತೀರ್ಣರಾದ ಮತ್ತು ಫಲಿತಾಂಶವನ್ನು ತಿರಸ್ಕರಿಸಿ ಪೂರಕ ಪರೀಕ್ಷೆ ಬರೆಯಲು ಬಯಸಿದ್ದ ಅಭ್ಯರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು.
ಪರೀಕ್ಷೆಗೆ ಒಟ್ಟು 111781 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 46270 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶೇ.75 ರಷ್ಟು ಹಾಜರಾತಿ ಕೊರತೆಯಿದ್ದ ಕಾರಣದಿಂದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ 2446 ವಿದ್ಯಾರ್ಥಿಗಳು ಸಹ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ 2020 ವಿದ್ಯಾರ್ಥಿಗಳು ಹಾಜರಾಗಿದ್ದು, 108 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
2022-23ನೇ ಸಾಲಿನ ವಾರ್ಷಿಕ ಪರೀಕ್ಷೆ ಬರೆದಿದ್ದ 8,35,102 ವಿದ್ಯಾರ್ಥಿಗಳಲ್ಲಿ 1,34,483 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.