ಹೊಸದಿಗಂತ ಚಿತ್ರದುರ್ಗ
ರೈತರಿಗೆ ಸಕಾಲಕ್ಕೆ ಸರಿಯಾಗಿ ಯೂರಿಯಾ ಗೊಬ್ಬರವನ್ನು ನೀಡದ ಕೃಷಿ ಸಚಿವ ಚೆಲುವ ನಾರಾಯಣಸ್ವಾಮಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹಿಸಿ ವಾಸುದೇವ ಮೇಟಿ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನೆ ನಡೆಸಿದ ರೈತರು ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಸಾಲಸೂಲ ಮಾಡಿ ಬಂಗಾರ ಗಿರವಿ ಇಟ್ಟು ಬಿತ್ತನೆ ಮಾಡಿ ಮುಗಿಲು ನೋಡುವಂತಹ ಸಂದರ್ಭದಲ್ಲಿ ತುಂತುರ ಮಳೆ ಬಂದು ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಯಾರಿಯಾ ಗೊಬ್ಬರ ಬೇಕಾಗಿದ್ದು, ರೈತ ಗೊಬ್ಬರದ ಅಂಗಡಿಗಳಿಗೆ ಹೋಗಿ ಯೂರಿಯಾ ಕೊಡಿಯೆಂದು ಕೇಳಿದರೆ ಒಂದು ಯೂರಿಯ ಪಾಕೇಟ್‌ಗೆ ಒಂದು ಲಿಂಕನ್ನು ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಅದಕ್ಕೆ ರೂ.೭೫೦ ಗಳನ್ನು ಕೇಳುತ್ತಾರೆ. ನಮಗೆ ಲಿಂಕ್ ಬೇಡ ಎಂದು ಹೇಳಿದರೆ ನಿಮಗೆ ಗೊಬ್ಬರ ಕೊಡುವುದಿಲ್ಲ ಎಂದು ವಾಪಾಸ್ ಕಳುಹಿಸುತ್ತಾರೆ. ಇದಕ್ಕೆ ಕೃಷಿಮಂತ್ರಿಗಳು ಶಾಮೀಲು ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ದೂರಿದರು.
ಸೊಸೈಟಿಗಳಿಗೆ ಒಬ್ಬ ರೈತನಿಗೆ ೧ ಅಥವಾ ೨ ಪಾಕೇಟ್ ಯೂರಿಯಾ ಗೊಬ್ಬರ ನೀಡುತ್ತಿದ್ದು, ಸುಮಾರು ೩೦೦ ಮೀಟರ್‌ಗಳಿಂದ ೪೦೦ ಮೀಟರ್‌ಗಳವರೆಗೂ ರೈತರು ಸರತಿ ಸಾಲಿನಲ್ಲಿ ನಿಂತು ೧ ರಿಂದ ೨ ಪಾಕೇಟ್ ಯೂರಿಯ ಗೊಬ್ಬರವನ್ನು ಪಡೆಯಬೇಕಾಗಿದೆ. ೨ ಪಾಕೇಟ್ ತೆಗೆದುಕೊಂಡು ಹೋಗಿ ರೈತ ಎಷ್ಟು ಎಕರೆಗೆ ಬೆಳೆಗೆ ಹಾಕಬೇಕು ಉಳಿದ ಬೆಳೆಗಳಿಗೆ ಏನು ಹಾಕಬೇಕು ಇದಕ್ಕೆ ಜಂಟಿ ಕೃಷಿ ನಿರ್ದೇಶಕರು ಉತ್ತರವನ್ನು ನೀಡಬೇಕು ಮಳೆ ಬಂದು ಹದವಾಗಿ ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ಯಾರಿಯಾ ಗೊಬ್ಬರ ಹಾಕಿದರೆ, ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ. ರೈತರಿಗೆ ಬೇಕಾಗಿರುವ ಗೊಬ್ಬರ ಸಮಯಕ್ಕೆ ಸರಿಯಾಗಿ ಪೊರೈಕೆ ಮಾಡಲು ಆಗುತ್ತಿಲ್ಲ. ರೈತರ ಜೀವನದಲ್ಲಿ ಚಲ್ಲಾಟವಾಡಬೇಡಿ ಕೃಷಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದಿಂದ ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆರ್.ಲಕ್ಷ್ಮೀಕಾಂತ ಲಿಂಗಾವರ ಹಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಲೋಲಾಕ್ಷಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್, ಮಾರುತಿ ಸಿರಿಗೆರೆ, ಉಪಾಧ್ಯಕ್ಷ ನಿಜಲಿಂಗಪ್ಪ, ಸಂಚಾಲಕ ತಿಪ್ಪೇಸ್ವಾಮಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ, ಹಿರಿಯೂರು ಅಧ್ಯಕ್ಷ ರಂಗಸ್ವಾಮಿ, ಹೊಳಲ್ಕೆರೆ ಅಧ್ಯಕ್ಷ ನಾಗರಾಜ್, ಚಿತ್ರದುರ್ಗ ನಗರ ಘಟಕದ ಅಧ್ಯಕ್ಷ ಸೈಯ್ಯದ್ ಮಮ್ತಾರಾಜ್, ಉಪಾಧ್ಯಕ್ಷ ವೆಂಕಟೇಶ್, ತಾಳ್ಯ ಹೋಬಳಿ ಅಧ್ಯಕ್ಷ ರಾಜಕುಮಾರ್, ಮಂಜುನಾಥ್, ಯವ ಘಟಕದ ಉಪಾಧ್ಯಕ್ಷ ಹನುಮಂತಪ್ಪ, ಆಂಜನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.