ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಬಿಐ ವಿಚಾರಣೆ ಎದುರಿಸಿದ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಅವರಿಗೆ ಮತ್ತೆ ಜನವರಿ 19 ರಂದು 2ನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ.
ಸೋಮವಾರ ಇಲ್ಲಿನ ಸಿಬಿಐ ಕೇಂದ್ರ ಕಚೇರಿಯಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಗಾದ ವಿಜಯ್ ಗೆ ಮಂಗಳವಾರ ಮತ್ತೆ ಬರುವಂತೆ ಸೂಚಿಸಲಾಗಿದೆ. ಆದರೆ ಪೊಂಗಲ್ ಹಬ್ಬವನ್ನು ಉಲ್ಲೇಖಿಸಿ ಮತ್ತೊಂದು ದಿನಾಂಕಕ್ಕೆ ವಿಜಯ್ ಮನವಿ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎಸ್ ಡೇವಿಡ್ಸನ್ ದೇವಾಶಿರ್ವತಂ ಅವರನ್ನು ಕೂಡ ಸಿಬಿಐ ಸೋಮವಾರ ವಿಚಾರಣೆಗೆ ಒಳಪಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ಸಿಬಿಐ ಎಸ್‌ಐಟಿಯಿಂದ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ತಮಿಳುನಾಡಿನ ಕರೂರ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್ 27 ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.


