ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರು ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದ್ದು, ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ಅವರಿಗೆ ಎರಡನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಜನವರಿ 19 (ನಾಳೆ) ದೆಹಲಿಯ ಸಿಬಿಐ ಕಚೇರಿಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 27ರಂದು ನಡೆದ ರ‍್ಯಾಲಿಯಲ್ಲಿ 41 ಮಂದಿ ಮೃತಪಟ್ಟಿದ್ದ ದುರಂತದ ತನಿಖೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಜಯ್ ರಸ್ತೋಗಿ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ.
ಈ ಹಿಂದೆ ಜನವರಿ 12ರಂದು ವಿಜಯ್ ಅವರನ್ನು ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ವಿಜಯ್ ಅವರು, “ಘಟನೆಗೆ ನಾನು ಅಥವಾ ನನ್ನ ಕಾರ್ಯಕರ್ತರು ಕಾರಣರಲ್ಲ, ಪರಿಸ್ಥಿತಿ ಹತೋಟಿ ಮೀರುವ ಆತಂಕದಿಂದ ನಾನು ಸ್ಥಳದಿಂದ ನಿರ್ಗಮಿಸಿದೆ” ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗಳ ಸತ್ಯಾಸತ್ಯತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗಿದೆ.


