ಹೊಸದಿಗಂತ ವರದಿ, ಕಾರವಾರ
ಆ. 13 ಮತ್ತು 14 ರಂದು ಕಾರವಾರ ಶಾಸಕ ಸತೀಶ ಸೈಲ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಲಕ್ಷಾಂತರ ರೂ.ಗಳ ನಗದು ಮತ್ತು ಸುಮಾರು 6.20 ಕೋ.ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಾಸಕ ಸತೀಶ ಸೈಲ್ ರ ಕಾರವಾರದ ಚಿತ್ತಾಕುಲದಲ್ಲಿರುವ ಹಾಗೂ ಇನ್ನೊಂದು ಕಡೆ ಇರುವ ಎರಡು ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ಈ ವೇಳೆ ಶಾಸಕರು ಮತ್ತು ಕುಟುಂಬಸ್ಥರು ಮನೆಯಲ್ಲಿ ಇದ್ದಿರಲಿಲ್ಲ. ಅವರ ಮನೆಯಲ್ಲಿ ಎರಡು ದಿನಗಳ ಕಾಲ ದಾಖಲೆಗಳ ಹಾಗೂ ಅವರ ಕಚೇರಿಯ ಮ್ಯಾನೇಜರ ಮತ್ತು ಸಹಾಯಕರನ್ನು ಹಾಗೂ ಬ್ಯಾಂಕ್ ಮ್ಯಾನೇಜರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.
ಇಡಿ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 1.68 ಕೋ.ರೂ. ನಗದು ಹಣ, 6.75 ಕೆ.ಜಿ ಬಂಗಾರದ ಆಭರಣಗಳು ಇದರ ಮೌಲ್ಯ ಸುಮಾರು 6.20 ಕೋ.ರೂ ಎನ್ನಲಾಗಿದೆ. ಇದರ ಜೊತೆ ಬ್ಯಾಂಕ ಬ್ಯಾಲೆನ್ಸ್ ಹಾಗೂ ಕೆಲವು ವಸ್ತುಗಳು ಸೇರಿದಂತೆ ಒಟ್ಟು 14.13 ಕೋ.ರೂ. ಮೌಲ್ಯದ ಸೊತ್ತುಗಳನ್ನು ಅವರು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.
ಶಾಸಕ ಸತೀಶ ಸೈಲ್ ನೇತೃತ್ವದಲ್ಲಿರುವ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಮೂಲಕ ಅಂಕೋಲಾ ತಾಲೂಕಿನ ಬೇಲೆಕೇರಿಯಲ್ಲಿ 2010 ರಲ್ಲಿ ಮ್ಯಾಂಗನೀಸ್ ಅದಿರು ವ್ಯವಹಾರ ನಡೆಸುತ್ತಿರುವಾಗ ಅದಿರು ನಾಪತ್ತೆ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಇಡಿ ಅವರ ದಾಳಿ ಅದಿರು ವಹಿವಾಟು ಹಾಗೂ ಸಾಕಷ್ಟು ಸ್ವತ್ತುಗಳು ಹೊಂದಿರುವ ಕುರಿತು ಇಡಿ ದಾಳಿ ನಡೆದಿತ್ತು ಎನ್ನಲಾಗಿದೆ.