ಹೊಸದಿಗಂತ ಡಿಜಿಟಲ್ ಡೆಸ್ಕ್;
ಕಾಸರಗೋಡು ಜಿಲ್ಲೆಯ ಎರಿಕ್ಕುಳದ ಮಣ್ಣಿನ ಪಾತ್ರೆಗಳು ಶೀಘ್ರದಲ್ಲೇ ಭೌಗೋಳಿಕ ಸೂಚ್ಯಂಕ (ಜಿಐ ಪದವಿ) ಮಾನ್ಯತೆ ಗಳಿಸಲಿದೆ. ಭೌಗೋಳಿಕ ಸೂಚ್ಯಂಕಕ್ಕೆ ಪರಿಗಣಿಸಲಾಗುವ ಏಕೈಕ ಮಣ್ಣಿನ ಪಾತ್ರೆ ನಿರ್ಮಾಣ ಕೇಂದ್ರ ಎರಿಕ್ಕುಳವಾಗಿದೆ.
ಎರಿಕ್ಕುಳದ ೩೬ ಎಕರೆ ಪ್ರದೇಶದ ಗದ್ದೆಯಲ್ಲಿ ತರಕಾರಿ ಕೊಯ್ಲಿನ ಬಳಿಕ ಪ್ರತೀ ವರ್ಷ ವಿಷುವಿನ (ಸೌರಮಾನ ಯುಗಾದಿ) ಹಿಂದಿನ ದಿನ ಮಣ್ಣು ಸಂಗ್ರಹಿಸಿ ನಿರ್ಮಿಸುವ ಮಣ್ಣಿನ ಪಾತ್ರೆಗಳಿಗೆ ಭಾರೀ ಬೇಡಿಕೆಯಿದೆ. ಮಣ್ಣಿನ ಪಾತ್ರೆ ತಯಾರಿಯನ್ನು ಕುಲ ಕಸುಬನ್ನಾಗಿ ಮಾಡಿದ ನೂರಕ್ಕೂ ಹೆಚ್ಚು ಕುಟುಂಬಗಳ ಸದಸ್ಯರೆಲ್ಲರೂ ಸೇರಿ ಗದ್ದೆಯ ವಿವಿಧ ಭಾಗಗಳಿಂದ ಮೇಲ್ಮಣ್ಣು ತೆರವುಗೊಳಿಸಿ ಅಗೆದು ಮಣ್ಣು ಸಂಗ್ರಹಿಸುವರು.
ಪಾತ್ರೆ ತಯಾರಿಗೆ ಯೋಗ್ಯ
ಬಿಳಿ ಬಣ್ಣವಿರುವ ಜೇಡಿ ಮಣ್ಣು ಮತ್ತು ಹಲವು ಬಣ್ಣಗಳಿರುವ ಮಣ್ಣನ್ನು ಅಗೆದು ಸಂಗ್ರಹಿಸಲಾಗುತ್ತಿದೆ. ಅದನ್ನು ಬಳಿಕ ಮಣ್ಣಿನ ಪಾತ್ರೆ ಗುಂಡಿಗಳಲ್ಲಿ ಹಂತ ಹಂತ ಇರಿಸಲಾಗುವುದು. ಒಂದು ಮಳೆ ಬಿದ್ದರೆ ಈ ಮಣ್ಣು ಪಾತ್ರೆ ತಯಾರಿಗೆ ಯೋಗ್ಯವಾಗಿರುತ್ತದೆ. ಇಲ್ಲಿನ ಮಣ್ಣಿನ ಪಾತ್ರೆ ತಯಾರಿ, ಅದಕ್ಕಿರುವ ಸಿದ್ಧತೆಗಳು ವಿಭಿನ್ನವಾಗಿವೆ. ಮರು ಬಳಕೆಗೆ ಸಾಧ್ಯವಿರುವ ಇಲ್ಲಿನ ಮಣ್ಣಿನಲ್ಲಿ ಅಡಕವಾಗಿರುವ ಅಂಶಗಳನ್ನು ಪರಿಗಣಿಸಿ ಭೌಗೋಳಿಕ ಸೂಚ್ಯಂಕಕ್ಕೆ ಪರಿಗಣಿಸಲು ನಿರ್ಧರಿಸಲಾಗಿದೆ.