ಹೊಸದಿಗಂತ ವರದಿ, ಮಂಗಳೂರು:
ಉಪನಿಷತ್ ನಲ್ಲಿಯೇ ಕಾಶಿಯ ಉಲ್ಲೇಖವಿದೆ, ಕಾಶಿಯ ದೇಗುಲದ ಗೋಡೆಗಳ ಮೇಲೆ ಇತಿಹಾಸವಿದೆ. ಕಾಶಿಯ ಇತಿಹಾಸವನ್ನು 12ನೇ ಶತಮಾನದಿಂದ ಉಲ್ಲೇಖಿಸುವುದು ತಪ್ಪು’ ಎಂದು ರಾಜ್ಯಸಭಾ ಸದಸ್ಯೆ ಡಾ.ಮೀನಾಕ್ಷಿ ಜೈನ್ ಹೇಳಿದರು.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳೂರು ಲಿಟ್ ಫೆಸ್ಟ್‌ನ ಎಂಟನೇ ಆವೃತ್ತಿಯ ಮೊದಲ ದಿನ ಶನಿವಾರ ಮಂಗಳೂರು ಲಿಟ್ ಫೆಸ್ಟ್ 2026ರ ಪ್ರಶಸ್ತಿ ಸ್ವೀಕರಿಸಿದ ಅವರು ‘ರಿ ಕನೆಕ್ಟಿಂಗ್ ಅವರ್ ಸಿವಿಲೈಜೇಶನಲ್ ಹೆರಿಟೇಜ್’ ಎಂಬ ವಿಷಯದ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
ಶತಾವಧಾನಿ ಆರ್. ಗಣೇಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ರವಿ ಎಸ್., ಭಾರತ್ ಫೌಂಡೇಶನ್ ಟ್ರಸ್ಟಿಗಳಾದ ಸುನೀಲ್ ಕುಲಕರ್ಣಿ, ಶ್ರೀರಾಜ್ ಗುಡಿ, ದುರ್ಗಾ ರಾಮದಾಸ್ ಕಟೀಲು, ಪ್ರದೀಪ್, ಸುಜಿತ್ ಪ್ರತಾಪ್ ಉಪಸ್ಥಿತರಿದ್ದರು
ಕಾಶಿಯ ಇತಿಹಾಸ 12 ನೇ ಶತಮಾನಕ್ಕಿಂತಲೂ ಹಿಂದೆಯೇ ತೆರೆದುಕೊಳ್ಳುತ್ತದೆ. ಮುಸಲ್ಮಾನರ ದಾಳಿಗಿಂತಲೂ ಮುನ್ನದ ಉಪನಿಷತ್ ಕಾಲದಿಂದ ಕಾಶಿಯ ಇತಿಹಾಸ ಅಧ್ಯಯನ ನಡೆಸಬೇಕು. ಕಾಶಿಯ ಜಾಗ ಹಿಂದುಗಳಿಗೆ ಸೇರಿದ್ದು ಎಂಬುದಕ್ಕೆ ಅನೇಕ ಪುರಾವೆಗಳಿರುವ ಕಾರಣ ಕಾಶಿ ಮರಳಿ ಹಿಂದುಗಳಿಗೆ ದೊರೆಯುವ ಭರವಸೆಯಿದೆ. ಈ ಮೂಲಕ ಕಾಶಿ ಹಿಂದುಗಳಿಗೆ ಸೇರಿದ್ದು ಎಂಬುದನ್ನು ಅವರು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
ಮಥುರಾ ಪ್ರಕರಣ ಇದಕ್ಕಿಂತ ಭಿನ್ನವಾಗಿದೆ. ಮಥುರಾ ಹಿಂದುಗಳಿಗೆ ಸೇರಿದ ಭೂಮಿ ಎಂದು ಅಲ್ಲಿನ ಮ್ಯೂಸಿಯಂನಲ್ಲಿರುವ ದಾಖಲೆಗಳು ಹೇಳುತ್ತವೆ. 1947ರವರೆಗೂ ಮಥುರಾ ಕೃಷ್ಣ ಜನ್ಮಭೂಮಿಯಾಗಿತ್ತು. ಮಥುರಾದ 13.37 ಎಕರೆ ಭೂಮಿಯಲ್ಲಿ ಮೂರು ಎಕರೆಯನ್ನು 1968 ರಲ್ಲಿ ಆಡಳಿತ ನಡೆಸುತ್ತಿದ್ದ ಸರಕಾರ ವಕ್ ಗೆ ಹಸ್ತಾಂತರಿಸಿದೆ. ಕಾನೂನಾತ್ಮಕವಾಗಿ ಈ ಭೂಮಿಯನ್ನು ಹಸ್ತಾಂತರ ಮಾಡಿರುವ ಕಾರಣ ವಾಪಸ್ ಪಡೆಯುವುದು ಸುಲಭವಲ್ಲ ಎಂದು ಇತಿಹಾಸ ತಜ್ಞರಾಗಿರುವ ಮೀನಾಕ್ಷಿ ಜೈನ್ ವಿಶ್ಲೇಷಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮೀನಾಕ್ಷಿ ಜೈನ್ ಅವರಿಗೆ ಸ್ಮರಣಿಕೆ ನೀಡಿದರು. ಪೃಥ್ವಿ ಕಾರಿಂಜೆ ಗೋಷ್ಠಿ ನಡೆಸಿಕೊಟ್ಟರು.

