January15, 2026
Thursday, January 15, 2026
spot_img

ಕಾಶಿ–ತಮಿಳು ಸಂಗಮ ಭಾರತದ ಏಕತೆಯ ಜೀವಂತ ಸಂಕೇತ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶಿ–ತಮಿಳು ಸಂಗಮವು ಭಾರತದ ವೈವಿಧ್ಯಮಯ ಸಂಸ್ಕೃತಿಗಳ ನಡುವೆ ಇರುವ ಆಳವಾದ ಏಕತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಅಪೂರ್ವ ಸಾಂಸ್ಕೃತಿಕ ವೇದಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಅವರು, ‘ಏಕ್ ಭಾರತ್, ಶ್ರೇಷ್ಠ ಭಾರತ್’ ಪರಿಕಲ್ಪನೆಯಡಿ ನಡೆಯುತ್ತಿರುವ ಈ ಸಂಗಮ ಕೇವಲ ಕಾರ್ಯಕ್ರಮವಲ್ಲ, ಶತಮಾನಗಳಿಂದ ಬೆಳೆದ ನಾಗರಿಕತೆಯ ಬಂಧಗಳ ಪುನರುಜ್ಜೀವನವಾಗಿದೆ ಎಂದು ಬಣ್ಣಿಸಿದ್ದಾರೆ.

ಇತ್ತೀಚೆಗೆ ಸೋಮನಾಥ ಸ್ವಾಭಿಮಾನ ಪರ್ವ್‌ನಲ್ಲಿ ಭಾಗವಹಿಸಿದ ಅನುಭವವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ದೇಶದ ನಾನಾ ಭಾಗಗಳಿಂದ ಬಂದ ಜನರನ್ನು ಭೇಟಿಯಾದ ಕ್ಷಣಗಳು ಭಾವನಾತ್ಮಕವಾಗಿದ್ದವು ಎಂದು ತಿಳಿಸಿದ್ದಾರೆ. ಇಂತಹ ಸಾಂಸ್ಕೃತಿಕ ಸಂವಾದಗಳು ಭಾರತದ ಆತ್ಮವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೊಂಗಲ್ ಹಬ್ಬದ ಸಂದರ್ಭದಲ್ಲಿ ತಮಿಳು ಸಂಸ್ಕೃತಿಯೊಂದಿಗೆ ತಮ್ಮ ವೈಯಕ್ತಿಕ ನಂಟನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ. ತಮಿಳು ಭಾಷೆಯನ್ನು ಕಲಿಯಲಾಗದೇ ಉಳಿದಿರುವುದು ತಮ್ಮ ಜೀವನದ ಒಂದು ವಿಷಾದ ಎಂದು ಹೇಳಿರುವ ಅವರು, ಕಾಶಿ, ರಾಮೇಶ್ವರಂ ಮತ್ತು ತೆಂಕಶಿಯಂತಹ ಪವಿತ್ರ ಕ್ಷೇತ್ರಗಳು ಉತ್ತರ–ದಕ್ಷಿಣ ಭಾರತದ ಆಧ್ಯಾತ್ಮಿಕ ಬಂಧದ ಸಾಕ್ಷಿಗಳೆಂದು ಉಲ್ಲೇಖಿಸಿದ್ದಾರೆ.

2022ರಲ್ಲಿ ಆರಂಭವಾದ ಕಾಶಿ–ತಮಿಳು ಸಂಗಮವು ಇಂದು ವಿದ್ವಾಂಸರು, ವಿದ್ಯಾರ್ಥಿಗಳು, ಕಲಾವಿದರು ಮತ್ತು ಯುವಕರನ್ನು ಒಗ್ಗೂಡಿಸುವ ಮಹತ್ವದ ವೇದಿಕೆಯಾಗಿದ್ದು, ಡಿಸೆಂಬರ್ 2, 2025ರಂದು ಆರಂಭವಾದ ನಾಲ್ಕನೇ ಆವೃತ್ತಿ “ತಮಿಳು ಕಾರ್ಕಳಂ – ತಮಿಳು ಕಲಿಯಿರಿ” ಎಂಬ ಥೀಮ್‌ನೊಂದಿಗೆ ವಿಶೇಷ ಗಮನ ಸೆಳೆದಿದೆ.

ಸಂಗಮವು ಪರಸ್ಪರ ಅರಿವು, ಸಾಂಸ್ಕೃತಿಕ ಕಲಿಕೆ ಮತ್ತು ರಾಷ್ಟ್ರೀಯ ಏಕತೆಯನ್ನು ಗಟ್ಟಿಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿ, ಪೊಂಗಲ್ ಮತ್ತು ಮಕರ ಸಂಕ್ರಾಂತಿ ಹಬ್ಬಗಳ ಮೂಲಕ ದೇಶದ ಸಾಮರಸ್ಯದ ಆತ್ಮ ಸದಾ ಜೀವಂತವಾಗಿರಲಿ ಎಂದು ಶುಭಾಶಯ ಕೋರಿದ್ದಾರೆ.

Most Read

error: Content is protected !!