ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರವೂ ಇಸ್ಲಮಾಬಾದ್‌ನ ರಕ್ತನಾಳ ಇದ್ದಂತೆ ಹಾಗೂ ಮುಂದೆಯೂ ಅದು ಹಾಗೆಯೇ ಇರುತ್ತದೆ ಹಾಗೂ ಪಾಕಿಸ್ತಾನ ಅದನ್ನು ಯಾವತ್ತೂ ಮರೆಯುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹೇಳಿಕೆ ನೀಡಿದ್ದಾರೆ.
ಓವರ್‌ಸೀಸ್ ಪಾಕಿಸ್ತಾನಿ (Pakistani) ಕನ್ವೆನ್ಷನ್‌ನಲ್ಲಿ ಭಾಷಣ ಮಾಡಿದ ಮುನೀರ್, ವಿದೇಶದಲ್ಲಿರುವವರು ದೇಶದ ರಾಯಭಾರಿಗಳು ಮತ್ತು ಅವರು ಉನ್ನತ ಸಿದ್ಧಾಂತ ಮತ್ತು ಸಂಸ್ಕೃತಿಗೆ ಸೇರಿದವರು ಎಂಬುದನ್ನು ಮರೆಯಬಾರದು . ನೀವು ಖಂಡಿತವಾಗಿಯೂ ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಯನ್ನು ಹೇಳಬೇಕು. ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಅಂಶದಲ್ಲೂ ನಾವು ಹಿಂದುಗಳಿಗಿಂತ ಭಿನ್ನರು ಎಂದು ಭಾವಿಸಿದ್ದರು. ನಮ್ಮ ಧರ್ಮಗಳು, ನಮ್ಮ ಪದ್ಧತಿಗಳು, ಸಂಪ್ರದಾಯಗಳು, ಆಲೋಚನೆಗಳು ಮತ್ತು ಮಹತ್ವಾಕಾಂಕ್ಷೆಗಳು ವಿಭಿನ್ನವಾಗಿವೆ. ಅದು ಎರಡು ರಾಷ್ಟ್ರಗಳ ಸಿದ್ಧಾಂತದ ಅಡಿಪಾಯವಾಗಿತ್ತು ಎಂದು ಹೇಳಿದ್ದಾರೆ.
ಪಾಕಿಸ್ತಾನಿಯರು ಹಿಂದು ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಈ ರಾಷ್ಟ್ರ ಹೇಗೆ ಹುಟ್ಟಿತು ಎಂಬ ಕಥೆಯನ್ನು ಹೇಳಬೇಕು. ಈ ವ್ಯತ್ಯಾಸವೇ ಪಾಕಿಸ್ತಾನ ರಚನೆಗೆ ಮೂಲ ಆಧಾರವಾಗಿದ್ದು, ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದ ಮಹತ್ವವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕರೆ ಕೊಟ್ಟಿದ್ದಾರೆ.
ಸ್ವಾತಂತ್ರ್ಯಕ್ಕೂ ಮುಂಚಿನ ವರ್ಷಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯವನ್ನು ಕೋರುವ ಚಳುವಳಿಗೆ ಎರಡು ರಾಷ್ಟ್ರಗಳ ಸಿದ್ಧಾಂತವು ಆಧಾರವಾಗಿತ್ತು. ಈ ಚಳುವಳಿಯ ನೇತೃತ್ವವನ್ನು ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆದ ಮುಹಮ್ಮದ್ ಅಲಿ ಜಿನ್ನಾ ವಹಿಸಿದ್ದರು. ಆದರೆ ಮುನೀರ್ ಹೇಳಿದ ಎರಡು ರಾಷ್ಟ್ರಗಳ ಸಿದ್ಧಾಂತವು ಭಾರತ ಮತ್ತು ಪಾಕಿಸ್ತಾನ ಹಂಚಿಕೊಳ್ಳುವ ಸಾಮಾನ್ಯ ಇತಿಹಾಸ ಮತ್ತು ಪರಂಪರೆಯ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿದೆ.
ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ. ಅದಕ್ಕಾಗಿಯೇ ನಮ್ಮ ಪೂರ್ವಜರು ಈ ದೇಶವನ್ನು ರಚಿಸಲು ಹೋರಾಡಿದರು. ನಮ್ಮ ಪೂರ್ವಜರು ಮತ್ತು ನಾವು ಈ ದೇಶದ ನಿರ್ಮಾಣಕ್ಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ. ನನ್ನ ಪ್ರೀತಿಯ ಸಹೋದರರೇ, ಸಹೋದರಿಯರೇ, ಹೆಣ್ಣುಮಕ್ಕಳೇ ಮತ್ತು ಪುತ್ರರೇ, ದಯವಿಟ್ಟು ಪಾಕಿಸ್ತಾನದ ಈ ಕಥೆಯನ್ನು ಮರೆಯಬೇಡಿ. ಪಾಕಿಸ್ತಾನದೊಂದಿಗಿನ ಅವರ ಬಾಂಧವ್ಯ ಎಂದಿಗೂ ದುರ್ಬಲವಾಗದಂತೆ ಈ ಕಥೆಯನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಲು ಮರೆಯಬೇಡಿ ಎಂದು ಅವರು ಹೇಳಿದ್ದಾರೆ.
ನಮ್ಮ ಧರ್ಮ ಬೇರೆ, ನಮ್ಮ ಆಚಾರಗಳು ಬೇರೆ, ನಮ್ಮ ಸಂಪ್ರದಾಯಗಳು ಬೇರೆ, ನಮ್ಮ ಆಲೋಚನೆಗಳು ಬೇರೆ, ನಮ್ಮ ಮಹತ್ವಾಕಾಂಕ್ಷೆಗಳು ಬೇರೆ, ಅಲ್ಲಿಯೇ ಎರಡು ರಾಷ್ಟ್ರ ಸಿದ್ಧಾಂತದ ಬುನಾದಿ ಹಾಕಲಾಯಿತು. ನಾವು ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ ಎಂದು ನಮ್ಮ ಮಕ್ಕಳಿಗೆ ತಿಳಿಸಿ. ಇಸ್ಲಾಮಿಕ್ ಗಣರಾಜ್ಯದ ಸೃಷ್ಟಿಗೆ ಇದು ಮುಖ್ಯ ಕಾರಣ ಎಂಬ ಸತ್ಯ ಅವರಿಗೆ ಗೊತ್ತಾಗಲಿ ಎಂದು ಹೇಳಿದರು.
ಇದೇ ವೇಳೆ ಕಾಶ್ಮೀರದ ಬಗ್ಗೆ ಮಾತನಾಡಿದ ಜನರಲ್ ಮುನೀರ್, ನಮ್ಮ ನಿಲುವು ಸಂಪೂರ್ಣವಾಗಿ ಸ್ಪಷ್ಟವಾಗಿದೆ, ಅದು ನಮ್ಮ ಕುತ್ತಿಗೆಯ ರಕ್ತನಾಳವಾಗಿತ್ತು, ಅದು ನಮ್ಮ ಕುತ್ತಿಗೆಯ ರಕ್ತನಾಳವಾಗಿರುತ್ತದೆ, ನಾವು ಅದನ್ನು ಮರೆಯುವುದಿಲ್ಲ. ನಾವು ನಮ್ಮ ಕಾಶ್ಮೀರಿ ಸಹೋದರರನ್ನು ಅವರ ವೀರೋಚಿತ ಹೋರಾಟದಲ್ಲಿ ಬಿಡುವುದಿಲ್ಲ ಕೈಬಿಡುವುದಿಲ್ಲ ಎಂದು ಮುನೀರ್ ಹೇಳಿದ್ದು, ಕಾಶ್ಮೀರಿ ಪ್ರತ್ಯೇಕತವಾದಿಗಳನ್ನು ಭಾರತದತ್ತ ಎತ್ತಿಕಟ್ಟುವ ಎಲ್ಲಾ ಪ್ರಯತ್ನಗಳು ಅವ ಮಾತಿನಲ್ಲಿ ಎದ್ದು ಕಂಡಿದೆ.