ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಹೊರಡಿಸುತ್ತಿದ್ದಂತೆ ಹಳೆ ಮೈಸೂರು ಭಾಗದಲ್ಲಿ ಕಾವೇರಿ ಕಿಚ್ಚು ಮತ್ತೆ ಭುಗಿಲೆದ್ದಿದೆ. ಬರದ ಬೇಗೆಯಲ್ಲಿ ಬೆಂದಿರುವ ಅನ್ನದಾತರು ಬೀದಿಗಿಳಿದು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಪ್ರಾಧಿಕಾರದ ಆದೇಶ:
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಎತ್ತಿ ಹಿಡಿದಿದ್ದು, ಕರ್ನಾಟಕಕ್ಕೆ ತೀವ್ರ ಹಿನ್ನೆಡೆಯಾಗಿದೆ. ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆಯಲ್ಲಿ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ:
ಆದೇಶ ಪ್ರಕಟವಾಗುತ್ತಿದ್ದಂತೆ ಮಂಡ್ಯದ ಸಂಜಯ್ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿ, CWMA ವಿರುದ್ಧ ತೀವ್ರ ಧಿಕ್ಕಾರ ಕೂಗಿದ್ದಾರೆ. ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ರೈತರನ್ನು ಪೊಲೀಸರು ತಡೆದಾಗ, ಆಕ್ರೋಶಗೊಂಡ ಹೋರಾಟಗಾರರೊಬ್ಬರು ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ತಕ್ಷಣ ಬಾಟಲಿ ಕಸಿದುಕೊಂಡಿದ್ದಾರೆ.
ಇದನ್ನೂ ಓದಿ:
ಶ್ರೀರಂಗಪಟ್ಟಣದಲ್ಲಿ ಜಲಸತ್ಯಾಗ್ರಹ:
ಶ್ರೀರಂಗಪಟ್ಟಣದ ಪ್ರಸಿದ್ಧ ಸ್ನಾನಘಟ್ಟದ ಬಳಿ ಕಾವೇರಿ ನದಿಗೆ ಇಳಿದು ರೈತರು ವಿನೂತನವಾಗಿ ಜಲಸತ್ಯಾಗ್ರಹ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆದಿದ್ದು, ಜಯಮಾಲಾ, ರಾಕ್‌ಲೈನ್ ವೆಂಕಟೇಶ್, ಸಾರಾ ಗೋವಿಂದು ಸೇರಿದಂತೆ ಸ್ಯಾಂಡಲ್‌ವುಡ್ ಗಣ್ಯರು ರೈತರ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ.



