ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ವಿವಾದದ ಸುಳಿಯಲ್ಲಿ ಸಿಲುಕಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸರ್ಸೆ ಸೆರಗ’ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ವಿರುದ್ಧ ಮಹಿಳಾ ಆಯೋಗ ಈಗ ಗರಂ ಆಗಿದೆ.
ಹಾಡಿನ ಸಾಹಿತ್ಯವು ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುವಂತಿದೆ ಎಂಬ ದೂರು ಕೇಳಿಬಂದಿದೆ. ಭಾರತೀಯ ನ್ಯಾಯ ಸಂಹಿತೆ, ಸೈಬರ್ ಕಾನೂನು ಮತ್ತು ಪೋಕ್ಸೋ ಕಾಯ್ದೆಯಡಿ ಲೈಂಗಿಕ ಪ್ರಚೋದನೆ ನೀಡುವಂತಹ ದೃಶ್ಯಗಳಿವೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.
ಈ ಹಾಡಿನ ಬಗ್ಗೆ ಸಂಸತ್ತಿನಲ್ಲೂ ಚರ್ಚೆಯಾಗಿದ್ದು, ಈಗಾಗಲೇ ಸಿಬಿಎಫ್ಸಿ ಮತ್ತು ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಕೆಳಗಿನವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ:
ಪ್ರೇಮ್: ಚಿತ್ರದ ನಿರ್ದೇಶಕ.
ವೆಂಕಟ್ ಕೆ. ನಾರಾಯಣ: ಚಿತ್ರದ ನಿರ್ಮಾಪಕ.
ನೋರಾ ಫತೇಹಿ: ಹಾಡಿನಲ್ಲಿ ನಟಿಸಿರುವ ನಟಿ.
ಸಂಜಯ್ ದತ್: ಚಿತ್ರದ ಪ್ರಮುಖ ನಟ.
ರಕೀಬ್ ಆಲಂ: ಹಿಂದಿ ಅವತರಣಿಕೆಯ ಗೀತರಚನೆಕಾರ.
ಎಲ್ಲರೂ ಮಾರ್ಚ್ 24 ರಂದು ಮಧ್ಯಾಹ್ನ 12:30ಕ್ಕೆ ಸೂಕ್ತ ದಾಖಲೆಗಳೊಂದಿಗೆ ಆಯೋಗದ ಮುಂದೆ ಹಾಜರಾಗಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯೋಗ ಎಚ್ಚರಿಸಿದೆ.



