ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಭಾರೀ ಮಳೆಯಿಂದಾಗಿ ಉತ್ತರಾಖಂಡದ ಸೋನೆಪ್ರಯಾಗ ಮತ್ತು ಗೌರಿಕುಂಡ್‌ನಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ನಿರಂತರ ಪ್ರತಿಕೂಲ ಹವಾಮಾನದಿಂದಾಗಿ ಪ್ರಯಾಣಿಕರ ಸುರಕ್ಷತೆಗಾಗಿ ಜಿಲ್ಲಾಡಳಿತವು ಸೋನೆಪ್ರಯಾಗ ಮತ್ತು ಗೌರಿಕುಂಡ್‌ನಲ್ಲಿ ಪ್ರಯಾಣಿಕರನ್ನು ಸ್ಥಗಿತಗೊಳಿಸಿದೆ. ಮಳೆಯಿಂದಾಗಿ 4 ರಾಜ್ಯ ಹೆದ್ದಾರಿಗಳು, 10 ಸಂಪರ್ಕ ರಸ್ತೆಗಳು ಭೂಕುಸಿತದಿಂದ ಮುಚ್ಚಲ್ಪಟ್ಟಿವೆ. ಭಾರೀ ಮಳೆಯಿಂದಾಗಿ ಮಂದಾಕಿನಿ ಮತ್ತು ಅಲಕನಂದಾ ನದಿಗಳು ತುಂಬಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜ್ಯದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದರು. ಪ್ರತಿ ವರ್ಷ ಇಲ್ಲಿ ನಾವು ಮಳೆಗಾಲದಲ್ಲಿ ಪ್ರಕೃತಿ ವಿಕೋಪಗಳನ್ನು ಎದುರಿಸಬೇಕಾಗುತ್ತದೆ, ಅತಿವೃಷ್ಟಿಯಿಂದ ಭೂಕುಸಿತಗಳು ಸಂಭವಿಸುತ್ತವೆ ಮತ್ತು ನದಿಗಳ ನೀರಿನ ಮಟ್ಟವು ಹೆಚ್ಚಾಗುತ್ತದೆ. ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ವಿಪತ್ತು ನಿರ್ವಹಣೆಯಲ್ಲಿರುವವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಅಲರ್ಟ್ ಮೋಡ್‌ನಲ್ಲಿದ್ದಾರೆ. ಇತರ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಎನ್‌ಡಿಆರ್‌ಎಫ್, ಸೇನೆ, ಪಿಡಬ್ಲ್ಯೂಡಿ ಇಲಾಖೆ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ನಾವು ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ಎಂದು ಸಿಎಂ ಹೇಳಿದರು.
ಏತನ್ಮಧ್ಯೆ, ಮಂಗಳವಾರ ಉತ್ತರಾಖಂಡದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾದ್ದರಿಂದ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.