ಇಂದಿನಿಂದ ಕೇದಾರನಾಥ ಭಕ್ತರಿಗೆ ಮುಕ್ತ: ಪ್ರಧಾನಿ ಹೆಸರಲ್ಲಿ ಅಗ್ರಪೂಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವಿತ್ರ ಕೇದಾರ​ನಾಥ​​ ದೇಗುಲದ ದ್ವಾರವನ್ನು ಶಾಸ್ತ್ರೋಕ್ತವಾಗಿ ಇಂದು (ಮೇ 2) ತೆರೆಯಲಾಯಿತು. ಸುಮಾರು 15,000 ಭಕ್ತರು ಮೊದಲ ದಿನ ದರುಶನ ಪಡೆದರು.

ಕೇದಾರನಾಥದ ಪ್ರಧಾನ ಅರ್ಚಕ ರಾವಲ್ ಭೀಮಾಶಂಕರ್ ಲಿಂಗ್ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಏಪ್ರಿಲ್ 30ರಂದು ತೆರೆಯಲಾದ ಯಮುನೋತ್ರಿ ಮತ್ತು ಗಂಗೋತ್ರಿಯ ದ್ವಾರಗಳು ಭಕ್ತರ ದರುಶನಕ್ಕೆ ಮುಕ್ತವಾಗಿವೆ. ಇಂದು ಕೇದಾರನಾಥದ​ ದ್ವಾರ ತೆರೆದಿದೆ. ಬದರಿನಾಥದ ಬಾಗಿಲು ಮೇ 4ರಂದು ತೆರೆಯಲಿದೆ. ಈ ಮೂಲಕ ಉತ್ತರಾಖಂಡದ ಪ್ರಸಿದ್ಧ ಚಾರ್​ಧಾಮ್​ ಯಾತ್ರೆ ಆರಂಭವಾಗುತ್ತದೆ.

ಕೇದಾರನಾಥ​ ದೇಗುಲದ ಮೊದಲ ಪೂಜೆಯ ಸಮಯದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅಗ್ರ ಪೂಜೆ ನಡೆಯಿತು. ದೇಶದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಸಿಎಂ ಧಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥನ ಅನುಯಾಯಿಯಾಗಿದ್ದು, ಅವರ ಮಾರ್ಗದರ್ಶನದಿಂದ 2013ರ ವಿಕೋಪದ ಬಳಿಕ ಬೃಹತ್​ ಮೂಲಸೌಕರ್ಯವನ್ನು ಇಲ್ಲಿ ಕಲ್ಪಿಸಲಾಗಿದೆ ಎಂದರು.

ದೇಗಲವನ್ನು 108 ಕ್ವಿಂಟಲ್​ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ನೇಪಾಳ, ಥೈಲ್ಯಾಂಡ್​​ ಮತ್ತು ಶ್ರೀಲಂಕಾದಿಂದಲೂ ಹೂವುಗಳನ್ನು ತರಿಸಲಾಗಿತ್ತು.

ಯಮುನೋತ್ರಿ, ಗಂಗೋತ್ರಿ, ಕೇದರನಾಥ ಮತ್ತು ಬದ್ರಿನಾಥ​​ಗಳ ಚಾರ್​ಧಾಮ್​ ಯಾತ್ರೆ ಅಕ್ಟೋಬರ್​-ನವಂಬರ್​ವರೆಗೆ ಸಾಗಲಿದ್ದು, ಚಳಿಗಾಲದಲ್ಲಿ ಈ ದೇಗುಲಗಳ ದ್ವಾರವನ್ನು ಮುಚ್ಚಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!