ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಗೆ ಮತ್ತೆ ಸಂಕಷ್ಟ ಎದುರಾಗುವ ಲಕ್ಷಣ ಕಾಣುತ್ತಿದೆ.
ತಮ್ಮ ಮನೆ ದುರಸ್ತಿಗೆ ಮಾಡಿರುವ ವೆಚ್ಚದ ಕುರಿತು ಸಿಎಜಿ ಆಡಿಟ್ ನಡೆಸಲಿದ್ದು, ದೆಹಲಿ ಲೆಫ್ಟಿನೆಂಟ್ ಗವರ್ನರ್ (Delhi Lieutenant Governor)ಶಿಫಾರಸಿನ ಮೇರೆಗೆ ಸಿಎಜಿ ವಿಶೇಷ ಆಡಿಟ್‌ಗೆ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ.
ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್ 24 ಮೇ 2023 ರಂದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು, ಅದ್ರಲ್ಲಿ ಮುಖ್ಯಮಂತ್ರಿಯವರ ಮನೆಯ ದುರಸ್ತಿಗೆ ಮಾಡಿದ ವೆಚ್ಚದ ಬಗ್ಗೆ ಗಂಭೀರವಾದ ಹಣಕಾಸಿನ ಅಕ್ರಮಗಳು ಮತ್ತು ನಿಯಮಗಳ ಉಲ್ಲಂಘನೆಯನ್ನು ಆರೋಪಿಸಿದ್ದಾರೆ.
ಎಲ್ಜಿ ಈ ವಿಷಯದ ಬಗ್ಗೆ ಏಪ್ರಿಲ್ 27 ರಂದು ತನಿಖೆ ನಡೆಸಿ ವಾಸ್ತವ ವರದಿಯನ್ನು ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಕೇಳಿದ್ದರು.
ಏಪ್ರಿಲ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ 45 ಕೋಟಿ ರೂಪಾಯಿಗಳ ನವೀಕರಣ ಕಾಮಗಾರಿಯ ಬಗ್ಗೆ ಬಿಜೆಪಿ (BJP) ಆರೋಪಿಸಿತ್ತು. ಕೇಜ್ರಿವಾಲ್ ಅವರು ತಮ್ಮ ಮನೆಗೆ ಡಯೊರ್ ಪಾಲಿಶ್, ವಿಯೆಟ್ನಾಂ ಮಾರ್ಬಲ್, ದುಬಾರಿ ಪರದೆಗಳು ಮತ್ತು ಅತ್ಯಾಧುನಿಕ ಕಾರ್ಪೆಟ್‌ಗಳಂತಹ ಅತಿರಂಜಿತ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಎಎಪಿ ಕೇಜ್ರಿವಾಲ್ ಅವರನ್ನು ಸಮರ್ಥಿಸಿಕೊಂಡಿತ್ತು. ಲೋಕೋಪಯೋಗಿ ಇಲಾಖೆ (PWD) ಶಿಫಾರಸಿನ ಮೇರೆಗೆ ನವೀಕರಣವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ಸೇರಿಕೊಂಡು ಕೇಜ್ರಿವಾಲ್ ಅವರ ಅಧಿಕಾರದಲ್ಲಿ ಉಳಿಯುವ ಹಕ್ಕನ್ನು ಪ್ರಶ್ನಿಸಿತ್ತು. ತಮ್ಮ ಪಕ್ಷಕ್ಕೆ ‘ಆಮ್ ಆದ್ಮಿ ಪಾರ್ಟಿ’ (ಸಾಮಾನ್ಯ ವ್ಯಕ್ತಿಯ ಪಕ್ಷ) ಎಂದು ಹೆಸರಿದ್ದರೂ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯ ಜನರು ಹತಾಶವಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ಹುಡುಕುತ್ತಿದ್ದಾಗ ಕೇಜ್ರಿವಾಲ್ ತಮ್ಮ ಬಂಗಲೆಗಾಗಿ ಖರ್ಚು ಮಾಡಿದರು ಎಂದು ಪಕ್ಷದ ಹಿರಿಯ ನಾಯಕ ಅಜಯ್ ಮಾಕನ್ ಟ್ವೀಟ್ ಮಾಡಿದ್ದಾರೆ