ಕೆಂಪೇಗೌಡ ಪ್ರತಿಮೆ, ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ: ಕಾರ್ಯಕ್ರಮದ ಸಿದ್ದತೆಗೆ ಸಿಎಂ ಸೂಚನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಉದ್ಘಾಟನೆ ಹಾಗೂ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವಭಾವಿ ಸಭೆ ನಡೆಸಿದರು.

ಈ ಕಾರ್ಯಕ್ರಮದಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಯಾವುದೇ ತೊಡಕು ಆಗದಂತೆ ಕಾರ್ಯಕ್ರಮ ಆಯೋಜಿಸುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸುವ ‘ಬನ್ನಿ ನಾಡ ಕಟ್ಟೋಣ’ ಎಂಬ ಅಭಿಯಾನ ನಾಳೆಯಿಂದ ಪ್ರಾರಂಭವಾಗಲಿದ್ದು, ಈ ಅಭಿಯಾನ ಯಶಸ್ವಿಗೊಳಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಪಿಡಿಓಗಳ ಸಹಕಾರ ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಆರ್. ಅಶೋಕ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಾ. ಕೆ. ಸುಧಾಕರ್, ಬಿ. ಎ. ಬಸವರಾಜ, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣ ಗೌಡ, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಕೃಷ್ಣಪ್ಪ, ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!