ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆ, ಭ್ರಷ್ಟಾಚಾರದಿಂದ ಬೆಂಗಳೂರಿನ ಪ್ರತಿ ಕುಟುಂಬದ ಪರಿಸ್ಥಿತಿ ಏನಾಗಿದೆ ಎಂದು ನಂಗೆ ಗೊತ್ತು. ನುಡಿದಂತೆ ನಡೆದಿದ್ದೇವೆ ಅನ್ನೋರು ತಾವು ಮಾಡಿರುವ ಸಾಧನೆ ಏನು ಎನ್ನುವುದನ್ನು ತಿಳಿಸಲಿ ಎಂದು ಜೆಡಿಎಸ್ ವರಿಷ್ಠ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿದ್ಯುತ್ ದರ ಏರಿಕೆ ಮಾಡಿದ್ದಾರೆ, ಅಭಿವೃದ್ಧಿ ಇಲ್ಲ, ರೈತರ ಪಂಪ್ ಸೆಟ್ ಗಳಿಗೂ ಟಿಸಿ ಹಾಕಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು, ಅಧಿಕಾರಿಗಳು ರೈತರ ಜಾಗಕ್ಕೆ ಹೋಗಲು ದುಡ್ಡು ಕೊಡಬೇಕು. ಕೆಂಪೇಗೌಡ್ರು ಕಟ್ಟಿದ ಬೆಂಗಳೂರು ನಗರವನ್ನು ಕಾಂಗ್ರೆಸ್ ಸಂಪೂರ್ಣವಾಗಿ ನಾಶ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ನಾನು ಎರಡು ಅವಧಿಯಲ್ಲಿ ಅಧಿಕಾರ ನಡೆಸಿದಾಗ ನಾಡಿನ ಜನರಿಗೆ ಎಂದಿಗೂ ದ್ರೋಹ ಮಾಡಿಲ್ಲ, ಈ ಸರ್ಕಾರ ಇನ್ನೆರಡು ವರ್ಷಗಳು ಮುಂದುವರಿದ್ರೆ, ಇನ್ನೂ ಹತ್ತು ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನರ ತಲೆಗೆ ಕಟ್ಟುತ್ತಾರೆ. ಎರಡು ಸಾವಿರದಿಂದ ಜನರ ಬದುಕು ಬದಲಾವಣೆ ಮಾಡ್ತೀನಿ ಅಂದಿದ್ದೀರಿ, ನನ್ನ ಮನೆಗೆ ಒಬ್ಬ ಇಂಟೆಲಿಜೆನ್ಸ್ ಅಧಿಕಾರಿ ಕಳುಹಿಸಿ ನೋಡಿ ಎಷ್ಟು ಹೆಣ್ಣು ಮಕ್ಕಳು ಸಹಾಯಕ್ಕಾಗಿ ನನ್ನ ಮನೆಗೆ ಬರುತ್ತಿದ್ದಾರೆಂದು ಗೊತ್ತಾಗುತ್ತದೆ ಎಂದರು.