ಹೊಸದಿಗಂತ ವರದಿ ಅಂಕೋಲಾ:
ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಮಾರ್ಚ್ 7ರಿಂದ 12ರವರೆಗೆ ಆರು ದಿನಗಳ ಕಾಲ ದೆಹಲಿಯ ರವೀಂದ್ರ ಭವನದಲ್ಲಿ ಅಕಾಡೆಮಿಯ ವಾರ್ಷಿಕ ಉತ್ಸವ ಏರ್ಪಡಿಸಿದೆ.
ಕನ್ನಡ ಭಾಷೆಯಲ್ಲಿ ಹಾಗೂ ಅದರ ಅನುವಾದವಾಗಿ ಹಿಂದಿ /ಇಂಗ್ಲಿಷ್ ನಲ್ಲಿ ಕವಿತೆಗಳನ್ನು ವಾಚಿಸಲು ಕರ್ನಾಟಕದಿಂದ ಈ ಬಾರಿ ಉತ್ತರಕನ್ನಡ ಅಂಕೋಲಾದ ರೇಣುಕಾ ರಮಾನಂದರನ್ನು ಆಹ್ವಾನಿಸಲಾಗಿದೆ.
ಅಸ್ಸಾಮಿ, ಬೋಡೋ, ತೆಲಗು, ಗುಜರಾತಿ, ರಾಜಸ್ಥಾನಿ, ಉರ್ದು, ಮರಾಠಿ ಹೀಗೆ ದೇಶದ ಎಲ್ಲ ಭಾಷೆಗಳ ಕಲರವದ ಸಮ್ಮಿಶ್ರ ಸದ್ದಿನ ಜೊತೆ ಕನ್ನಡವೂ ಸೇರಿಕೊಂಡು ಸಮನ್ವಯಿಸಲಿರುವ ಈ ಉತ್ಸವದಲ್ಲಿ ಮಾರ್ಚ್ 9ರಂದು ರೇಣುಕಾ ರಮಾನಂದ ಮೂರು ನಾಲ್ಕು ಕನ್ನಡ ಕವಿತೆ ಹಾಗೂ ಅದರ ಅನುವಾದವನ್ನು ವಾಚಿಸಲಿದ್ದಾರೆ.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ರೇಣುಕಾ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ, ಸಂಗಂ ರಾಷ್ಟ್ರೀಯ ಪ್ರಶಸ್ತಿಗಳ ಜೊತೆ ಇನ್ನೂ ಹಲವಾರು ಪುರಸ್ಕಾರಗಳನ್ನು ತಮ್ಮ ಕಾವ್ಯಕ್ಕಾಗಿ ಪಡೆದಿದ್ದಾರೆ.
ಮೂರು ಕವಿತೆ ಹಾಗೂ ಒಂದು ಲೇಖನ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದ್ದು, ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಇವರ ಕನ್ನಡ ಕವಿತೆ ದಾಖಲಾಗಿದ್ದನ್ನು ಈ ಸಮಯದಲ್ಲಿ ನೆನೆಯಬಹುದು.