ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದ್ದು, ಈ ಪೈಕಿ ಮಂಗಳವಾರ ಒಂದು ಮೃತದೇಹ ಪತ್ತೆಯಾಗಿದೆ.
ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಮೃತ ಮಕ್ಕಳನ್ನು ಶ್ರೀನಿವಾಸ್ (ಜಾನ್ ಸೀನಾ) (15) ಮತ್ತು ಮಹಾಲಕ್ಷ್ಮಿ (13) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ಮೃತ ಮಕ್ಕಳ ತಾಯಿ, ಇತ್ತೀಚೆಗಷ್ಟೇ ಕೆಂಗೇರಿ ಸಮೀಪದ ಹರ್ಷ ಲೇಔಟ್ ಗೆ ಬಂದು ನೆಲೆಸಿದ್ದರು. ಕೆಲಸದ ನಿಮಿತ್ತ ತಾಯಿ ಹೊರ ಹೋಗಿದ್ದರು. ಈ ವೇಳೆ ತಂಗಿ ಜಾರಿ ಬಿದ್ದಿದ್ದು, ಆಕೆಯನ್ನು ಉಳಿಸಲು ಹೋಗಿ ಅಣ್ಣನೂ ಬಿದ್ದಿದ್ದ.
ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿಗೆ ಒಂದು ಮಗುವಿನ ಮೃತ ದೇಹ ಪತ್ತೆಯಾಗಿದ್ದು, ಇದು ಬಾಲಕಿ ಅಣ್ಣ ಶ್ರೀನಿವಾಸ್ (ಜಾನ್ ಸೀನಾ)ನ ದೇಹ ಎನ್ನಲಾಗಿದೆ. ಮಹಾಲಕ್ಷ್ಮಿಗಾಗಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದಿದೆ.