ಕಿಯೊನಿಕ್ಸ್, ಕೆಇಎ ಪರೀಕ್ಷಾ ಹಗರಣ – ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಿಯೋನಿಕ್ಸ್ ಭ್ರಷ್ಟಾಚಾರ, ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆಯವ‌ರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಕರ್ತವ್ಯವಿಮುಖರಾಗಿದ್ದು, ಸಚಿವರಾಗಿ ಮುಂದುವರೆಯಲು ಯಾವುದೇ ನೈತಿಕತೆ ಹೊಂದಿಲ್ಲ. ಹೀಗಾಗಿ ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಒತ್ತಾಯಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಅಕ್ರಮ ಮತ್ತು ಇದರಲ್ಲಿ ಪ್ರಿಯಾಂಕ್ ಖರ್ಗೆಯವರ ಕಬಂಧ ಬಾಹುಗಳ ಕುರಿತು ಸಿಬಿಐ ತನಿಖೆ ಮಾಡಲು ಗೃಹ ಸಚಿವ ಪರಮೇಶ್ವರ್ ಅವರು ಶಿಫಾರಸು ಮಾಡಬೇಕು ಎಂದರು. ತಾವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ನೀವ್ಯಾಕೆ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತೀರಿ? ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು.

ಪ್ರಿಯಾಂಕ ಖರ್ಗೆ ವಿರುದ್ಧ ಬಿಜೆಪಿ ವ್ಯಾಪಕ ದಾಳಿ

ಮಂಗಳವಾರ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದ ಮೂಲಕವೂ ಪ್ರಿಯಾಂಕ ಖರ್ಗೆ ವಿರುದ್ಧ ಪ್ರಶ್ನೆಗಳ ದಾಳಿಯನ್ನೇ ನಡೆಸಿದೆ. ಬಿ ವೈ ವಿಜಯೇಂದ್ರ ಸಹ ಈ ಬಗ್ಗೆ ಮಾತನಾಡಿದ್ದು, ಪರೀಕ್ಷಾ ಅಕ್ರಮದ ಸೂತ್ರಧಾರರರಿಗೆ ಕಲಬುರಗಿಯ ಉಸ್ತುವಾರಿ ಸಚಿವರ ಸಖ್ಯದ ಪ್ರಭಾವ ಇರುವುದರಿಂದಲೇ ಅವರು ತಪ್ಪಿಸಿಕೊಳ್ಳುವ ಸ್ಥಿತಿ ಬರುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೇ ನೀಡಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಪಿ ಎಸ್ ಐ ಹಗರಣದ ಪ್ರಮುಖ ರೂವಾರಿ ಎಂಬ ಆರೋಪ ಹೊತ್ತಿರುವ ಆರ್ ಡಿ ಪಾಟೀಲ್, ಪ್ರಿಯಾಂಕ ಖರ್ಗೆಗೆ ಹತ್ತಿರದ ವ್ಯಕ್ತಿ ಎಂಬುದು ಬಿಜೆಪಿಯ ವಾಗ್ದಾಳಿಗಳ ಹಿಂದಿರುವ ಪ್ರಮುಖಾಂಶ. ಅಲ್ಲದೇ, ಇತ್ತೀಚೆಗೆ ಟಿವಿ ವಾಹಿನಿಗಳ ಎದುರು ಕಿಯೊನಿಕ್ಸ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಡಿರುವ ಕಮಿಷನ್ ಆರೋಪಗಳನ್ನೂ ಉಲ್ಲೇಖಿಸುತ್ತಿರುವ ಬಿಜೆಪಿ, ಇದರ ಹಿಂದೆಯೂ ಪ್ರಿಯಾಂಕ ಖರ್ಗೆ ಪ್ರಭಾವ ಇರುವುದಾಗಿ ಆರೋಪಿಸುತ್ತಿದೆ.

ಭ್ರಷ್ಟಾಚಾರ ತುಂಬಿದ ಸರ್ಕಾರ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಳೆದ ಆರು ತಿಂಗಳಿನಿಂದ ಭ್ರಷ್ಟಾಚಾರ ಎಂಬುದು ಒಂದು ಸೀಮೆ ಮೀರಿದ ವಿದ್ಯಮಾನವಾಗಿದೆ. ಕಿಯೋನಿಕ್ಸ್ ಎಂಡಿ, ಗುತ್ತಿಗೆದಾರರ ಬಳಿ ಸುಮಾರು 12 ಶೇಕಡಾ ಕಮಿಷನ್‍ಗಾಗಿ ಒತ್ತಾಯ ಮಾಡಿದ್ದಾರೆ. ಸರಕಾರವು ತನ್ನೆಲ್ಲ ಕರ್ತವ್ಯವನ್ನು ಲೂಟಿ ಮಾಡುವ ಕಡೆ ಗಮನ ಹರಿಸಿದಂತಿದೆ. ಕಾಂಗ್ರೆಸ್‍ನಲ್ಲಿ ಗೆಜೆಟೆಡ್ ಹುದ್ದೆಗೆ ರೇಟ್ ನಿಗದಿಯಾಗಿದೆ. ಐಎಎಸ್ ಹುದ್ದೆಗಳು ಬಿಕರಿ ಆಗುತ್ತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆಯವರು ಇವತ್ತು ಈ ಎಲ್ಲ ವಿದ್ಯಮಾನಗಳ ಕೇಂದ್ರಬಿಂದುವಿನಂತಿದ್ದಾರೆ. ಗುಲ್ಬರ್ಗದ ಕೆಇಎ ಪರೀಕ್ಷೆಯ ಅಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಪ್ರಯತ್ನ ಪಟ್ಟಿದ್ದ ಆರ್.ಡಿ.ಪಾಟೀಲ್ ಪ್ರಮುಖ ಆರೋಪಿ. ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಯಾರನ್ನು ಬೊಟ್ಟು ಮಾಡಿದರೋ ಆ ಆರ್.ಡಿ.ಪಾಟೀಲ್‍ಗೆ ಸರಕಾರವೇ ಕೃಪಾಪೋಷಣೆ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.

“ನಿಮ್ಮ ಸಚಿವಾಲಯದ ಸಂಗಪ್ಪ ಇವತ್ತು ಹಣ ಕೇಳುತ್ತಾರೆ. ಗುತ್ತಿಗೆದಾರರು ಇವತ್ತು ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸರಕಾರ 300 ಕೋಟಿ ಹಣಕ್ಕೆ ಕಮಿಷನ್ ಕೇಳಿದ್ದಾಗಿ ಹೇಳಿದ್ದಾರೆ. ಇದಕ್ಕೆ ಉತ್ತರದಾಯಿ ಗ್ರಾಮೀಣಾಭಿವೃದ್ಧಿ ಸಚಿವರಾದ ನೀವೇ ಉತ್ತರ ಕೊಡಬೇಕು ಅಲ್ಲವೇ?. ಕಳೆದ 5 ತಿಂಗಳಿನಿಂದ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿ ಸುಮಾರು 80 ಸಾವಿರ ಜನರಿಗೆ ನೀವು ಗೌರವಧನ ಕೊಡಲು ಪ್ರಯತ್ನಿಸಿಲ್ಲ” ಎಂದು ಟೀಕಿಸಿದರು.

ಕಿಂಗ್‍ಪಿನ್‍ಗಳ ರಕ್ಷಣೆಗೆ ನಿಮಗೆ ಪುರುಸೊತ್ತಿದ್ಯಾ ?

ಜಲಜೀವನ್ ಮಿಷನ್ ಹಣ ಕೊಡಲು ನಿಮಗೆ ಪುರುಸೊತ್ತಿಲ್ಲ. ಆದರೆ ಕಿಂಗ್‍ಪಿನ್‍ಗಳ ರಕ್ಷಣೆ ಮಾಡಿ ಭ್ರಷ್ಟಾಚಾರಿಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಲಬುರ್ಗಿ ಒಳಗಿನ ವಿದ್ಯಮಾನಗಳ ಬಗ್ಗೆ ನಿಮ್ಮ ನೈತಿಕತೆ ಎಲ್ಲಿದೆ? ಎಂದು ಕೇಳಿದರಲ್ಲದೆ, ಆರ್.ಡಿ.ಪಾಟೀಲನನ್ನು ಬೆಳೆಸಿ, ಪೋಷಿಸಿ ಸಂರಕ್ಷಿಸಿದ್ದು ಪ್ರಿಯಾಂಕ್ ಖರ್ಗೆ ಎಂದು ದೂರಿದರು. ಈ ಎಲ್ಲ ಪ್ರಕರಣಗಳ ಕುರಿತಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಹಿಂದೂ ಸಂಸ್ಕೃತಿಗೆ ಬೆಲೆ ಕೊಡದ ಸರಕಾರ

ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ಬಿಜೆಪಿ ಜನಜಾಗೃತಿ ಮೂಡಿಸಲಿದೆ. ನಾಗರಿಕರ ನ್ಯಾಯಾಲಯದಲ್ಲಿ ಇದನ್ನು ಬಿಜೆಪಿ ಪ್ರಶ್ನಿಸಲಿದೆ. ಇಡೀ ಅಕ್ರಮದ ಬಗ್ಗೆ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಲಿದೆ. ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡಲಾಗುತ್ತದೆ. ಇನ್ನೊಂದೆಡೆ ಪರೀಕ್ಷೆಗೆ ಬಂದ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುತ್ತಾರೆ. ಹಿಂದುತ್ವ, ಹಿಂದೂ ಸಂಸ್ಕೃತಿಗೆ ಈ ಸರಕಾರ ಬೆಲೆ ಕೊಡುತ್ತಿಲ್ಲ. ಹಿಂದೂ ಮಹಿಳೆಯರ ಮಾಂಗಲ್ಯ ತೆಗೆಸುವ ದುಸ್ಸಾಹಸದ ಈ ಸರಕಾರದ ಮನಸ್ಥಿತಿ ಎಂಥದ್ದು? ಈ ಸರಕಾರಕ್ಕೆ ನಾಚಿಕೆ ಆಗಬೇಕು. ತಾಳಿ ತೆಗೆಸುವ ಮೂಲಕ ಸರಕಾರವು ರಾಜ್ಯದ ಹಿಂದೂಗಳ ಪರಿಸ್ಥಿತಿ ದುಸ್ಥಿತಿಗೆ ತಲುಪಿಸಿದ್ದರ ಸಂಕೇತ ಎಂದು ವಿಶ್ಲೇಷಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!