ಹೊಸದಿಗಂತ ಡಿಜಿಟಲ್ ಡೆಸ್ಕ್
ನಗರದಲ್ಲಿ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸರು, ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಏಳು ಮಂದಿ ಸೇರಿದಂತೆ ಒಟ್ಟು ಹತ್ತು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು, ‘ಟೀಂ ಕಲ್ಕಿ’ ಎಂಬ ಡಾರ್ಕ್‌ವೆಬ್ ಸೈಟ್ ಬಳಸಿ ನಗರದಾದ್ಯಂತ ಸರಬರಾಜು ಮಾಡುತ್ತಿದ್ದರು.
ಸುಮಾರು 4 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಸಾಮಾನ್ಯ ಗಾಂಜಾ, 2 ಕಾರುಗಳು ಹಾಗೂ 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಬಂಧಿತರು. ಇವರಲ್ಲಿ ಇಬ್ಬರು ಕರ್ನಾಟಕ, ಒಬ್ಬರು ಆಂಧ್ರ ಹಾಗೂ ಏಳು ಮಂದಿ ಕೇರಳದವರಾಗಿದ್ದಾರೆ.
ಥೈಲ್ಯಾಂಡ್‌ನಲ್ಲಿ ಕುಳಿತು ಡ್ರಗ್ಸ್ ಕಳುಹಿಸುತ್ತಿದ್ದ ಕೇರಳ ಮೂಲದ ಮುಖ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡಕ್ ಸೂಚನೆಯ ಬೆನ್ನಲ್ಲೇ ನಗರ ಪೊಲೀಸರು ಈಗ ಫುಲ್ ಅಲರ್ಟ್ ಆಗಿದ್ದಾರೆ.



