ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಿಧನರಾದ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಸಂಸ್ಮರಣಾ ಕಾರ್ಯಕ್ರಮಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಿದ ಕಾಂಗ್ರೆಸ್‌ನ ಕೆಲವು ನಾಯಕರ ಕ್ರಮ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿದೆ.
ಆದರೆ ವಿಧಾನಸಭೆ ವಿಪಕ್ಷ ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್ ಅವರು ಈ ಬಗ್ಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬುದನ್ನು ನಿರಾಕರಿಸಿ ಇದು ಪಕ್ಷ ಕೈಗೊಂಡ ಸರ್ವಾನುಮತದ ನಿರ್ಧಾರವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಅವರು ಸಿಎಂ ಪಿಣರಾಯಿ ವಿಜಯನ್ ಅವರ ಎದುರಲ್ಲೇ , ಚಾಂಡಿ ಅವರು ರಾಜಕೀಯ ವಿರೋಗಳ ಸಂಚಿಗೆ ಸಿಲುಕುವಂತಾಗಿತ್ತು ಎಂದು ಆರೋಪಿಸಿದ್ದು, ಈ ಮೂಲಕ ಪರೋಕ್ಷವಾಗಿ ಸೋಲಾರ್ ಹಗರಣವನ್ನು ಉಲ್ಲೇಖಿಸಿದರು. ಅವರ ಮಾತು ಪಕ್ಷದಲ್ಲಿ ಪಿಣರಾಯಿ ವಿಜಯನ್ ಅವನ್ನು ಆಹ್ವಾನಿಸಿದ ಕ್ರಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿದೆ ಎಂಬ ವರದಿಗೆ ಪುಷ್ಟಿ ನೀಡಿತು. ಪಿಣರಾಯಿ ವಿಜಯನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದಿತ್ತು ಎಂದು ಅನೇಕ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಹೇಳಲಾಗಿದೆ.
ಸೋಮವಾರ ತಿರುವನಂತಪುರಂನ ಅಯ್ಯಂಕಾಳಿ ಹಾಲ್‌ನಲ್ಲಿ ಚಾಂಡಿ ಸಂಸ್ಮರಣಾ ಕಾರ್ಯಕ್ರಮವನ್ನು ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿತ್ತು.ಈ ಸಭೆಗೆ ಸಿಎಂ ಪಿಣರಾಯಿ ಅವರನ್ನು ಆಹ್ವಾನಿಸಲಾಗಿತ್ತು.ಚರ್ಚ್ ನಾಯಕರು , ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದ ಸಭೆಯಲ್ಲಿ ಪಿಣರಾಯಿ ವಿಜಯನ್ ಮಾತನಾಡಿ , ಚಾಂಡಿ ಅವರು ಉತ್ತಮ ಮತ್ತು ಸಮರ್ಥ ನಾಯಕರಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್‌ನ ಸಕ್ರಿಯ ನಾಯಕರಾಗಿದ್ದರು ಎಂದು ನುಡಿದರು.