ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಸಲಹೆಯೊಂದು ನೀಡಿದ್ದು, ಆಡಳಿತಾರೂಢ ಸಿಪಿಐ(ಎಂ) ಕಾರಣವಾಗಿದೆ.
ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಬರಬೇಕೆಂದರೆ ಪಿಣರಾಯಿ ವಿಜಯನ್ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಬೇಕು ಎಂದು ರಾಮದಾಸ್ ಬಂಡು ಅಠಾವಳೆ ಹೇಳಿದ್ದು, ಸಿಪಿಐ(ಎಂ) ತೀವ್ರ ಟೀಕೆ ವ್ಯಕ್ತಪಡಿಸಿದೆ.
ವಿಜಯನ್ ಎನ್‌ಡಿಎ ಸೇರಿದರೆ ಅದು ಕ್ರಾಂತಿಕಾರಿ ನಡೆ ಮತ್ತು ಖಂಡಿತವಾಗಿಯೂ ಕೇರಳಕ್ಕೆ ಹೆಚ್ಚಿನ ಅನುದಾನ ಬರುತ್ತದೆ. ಈ ಅನುದಾನವನ್ನು ರಾಜ್ಯದ ಅಭಿವೃದ್ಧಿಗೆ ಬಳಸಬಹುದು ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ದೊಡ್ಡ ಪ್ಯಾಕೇಜ್ ನೀಡುತ್ತಾರೆ ಎಂದು ತಿಳಿಸಿದರು.
ಅಠಾವಳೆ ಅವರ ಮಾತಿಗೆ ಆಡಳಿತರೂಢ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗಳನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಕರೆದಿದ್ದಾರೆ. ಐದು ವರ್ಷಗಳಲ್ಲಿ ಕೇರಳದ ಹಕ್ಕಾದ ಸುಮಾರು 2 ಲಕ್ಷ ಕೋಟಿ ರೂಪಾಯಿ ನೀಡಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸಚಿವರ ಹೇಳಿಕೆ ಸಾಂವಿಧಾನಿಕ ತತ್ವಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿವೆ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಗೋವಿಂದನ್ ಹೇಳಿದರು.
ಕೇಂದ್ರ ಸಚಿವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮತ್ತೊಂದು ಹೇಳಿಕೆಯಲ್ಲಿ, ವಿಜಯನ್ ಎನ್‌ಡಿಎಗೆ ಸೇರ್ಪಡೆಯಾದರೆ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸುತ್ತಾರೆ. ಹೀಗಾಗಿ ಅವರು ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದ್ದಾರೆ. ಅಠಾವಳೆ ಅವರಿಗೆ ಕೇರಳ ರಾಜಕಾರಣದ ಬಗ್ಗೆ ತಿಳುವಳಿಕೆಯ ಕೊರತೆಯಿದೆ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ಗೋವಿಂದನ್ ಟೀಕಿಸಿದರು.


