ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ವಿದ್ಯಾರ್ಥಿನಿಯನ್ನು ವೇದಿಕೆಯ ಮೇಲೆ ಕರೆದಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಮುಲ್ಲಾನ ವರ್ತನೆ ಕುರಿತು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಇದು ʼಕುರಾನ್ ಆಜ್ಞೆಗಳನ್ನು ಸಂಪೂರ್ಣವಾಗಿ ಧಿಕ್ಕರಿಸಿʼ ಮುಸ್ಲಿಂ ಮಹಿಳೆಯರನ್ನು ಏಕಾಂತಕ್ಕೆ ತಳ್ಳುವ ಮತ್ತೊಂದು ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಆಗಿದ್ದೇನು?
ಮಲ್ಲಪ್ಪುರಂ ಜಿಲ್ಲೆಯ ಮದರಸಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸುವಾಗ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಬಹುಮಾನ ವಿತರಣೆಗಾಗಿ ವೇದಿಕೆಗೆ ಕರೆಯಲಾಗಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಖಂಡ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಲ್ ಆಕೆಗೆ ಪ್ರಶಸ್ತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕಾಗಿ ಕೇರಳದ ಜೆಮ್-ಇಯ್ಯತುಲ್ ಉಲಮಾದ ಹಿರಿಯ ಕಾರ್ಯನಿರ್ವಾಹಕ ಎಂಟಿ ಅಬ್ದುಲ್ಲಾ ಮುಸಲಿಯಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯನ್ನು ವೇದಿಕೆಗೆ ಏಕೆ ಕರೆದಿದ್ದೀರಿ ಎಂದು ದೂಷಿಸಿದ ಮುಸಲಿಯಾರ್ “10ನೇ ತರಗತಿಯ ಹುಡುಗಿಯನ್ನು ವೇದಿಕೆಗೆ ಆಹ್ವಾನಿಸಿದವರು ಯಾರು? ನೀವು ಹುಡುಗಿಯರನ್ನು ಇಲ್ಲಿಗೆ ಕರೆಯಬೇಡಿ. ನಿಮಗೆ ಸಮಸ್ತದ ನಿಯಮಗಳು ತಿಳಿದಿಲ್ಲವೇ? ಪ್ರಶಸ್ತಿ ಸಂಗ್ರಹಿಸಲು ವೇದಿಕೆಗೆ ಬರಲು ಆಕೆಯ ಪೋಷಕರಿಗೆ ಹೇಳಿ. ನಾವು ಇಲ್ಲಿ ಕುಳಿತಿರುವಾಗ ಇಂತಹ ಕೆಲಸಗಳನ್ನು ಮಾಡಬೇಡಿ. ಇದು ಫೋಟೋಗಳಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಪ್ರಸಾರವಾಗುತ್ತದೆ” ಎಂದು ಕೋಪದಲ್ಲಿ ಹೇಳಿದ್ದಾರೆ. ಅವರ ಹೇಳಿಕೆಯ ನಂತರ ಸಂಘಟಕರಲ್ಲೊಬ್ಬರು ಅವರ ಬಳಿ ಕ್ಷಮೆಯಾಚಿಸುತ್ತಿರುವುದು ಕಂಡು ಬಂದಿದೆ. ಈ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಟೀಕೆಗೆ ಗುರಿಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲ ಖಾನ್ ಅವರು “ಮಲಪ್ಪುರಂ ಜಿಲ್ಲೆಯಲ್ಲಿ ಯುವ ಪ್ರತಿಭಾವಂತ ಹುಡುಗಿಯೊಬ್ಬಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಪ್ರಶಸ್ತಿಗೆ ಅರ್ಹವಾದರೂ ಪ್ರಶಸ್ತಿಯನ್ನು ಸ್ವೀಕರಿಸುವಾಗ ವೇದಿಕೆಯ ಮೇಲೆ ಅವಮಾನಿಸಲ್ಪಟ್ಟಿದ್ದಾಳೆಂದು ತಿಳಿದು ದುಃಖವಾಗಿದೆ. ಮುಸ್ಲಿಂ ಧರ್ಮಗುರುಗಳು ಕುರಾನನ್ನು ತಪ್ಪಾಗಿ ಅರ್ಥೈಸಿ ಮಹಿಳೆಯರನ್ನು ಹೇಗೆ ಪ್ರತ್ಯೇಕವಾಗಿಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಮಹಿಳೆಯರೂ ಕೂಡ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಕುರಾನ್ ಹೇಳುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.