Friday, December 12, 2025

ಕೇರಳ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಮುಕ್ತಾಯ: ಕಾಸರಗೋಡು ಜಿಲ್ಲೆಯಲ್ಲಿ ಶೇ. 74.7ರಷ್ಟು ಮತದಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಇಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಶಾಂತಿಯುತವಾಗಿ ಮತದಾನ ನಡೆಯಿತು.

ಕಾಸರಗೋಡಿನ ಒಂದು ಜಿಲ್ಲಾ ಪಂಚಾಯತ್, 6 ಬ್ಲಾಕ್ ಪಂಚಾಯತ್, 38ಗ್ರಾಮ ಪಂಚಾಯತ್ ಹಾಗೂ ಮೂರು ನಗರಸಭೆಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಗುರುವಾರ ರಾತ್ರಿ 7 ಗಂಟೆಯ ತನಕದ ಲೆಕ್ಕಾಚಾರದಂತೆ ಶೇಕಡಾ 74.7ರಷ್ಟು ದಾಖಲಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನವು ಸಂಜೆ 6 ಗಂಟೆಯ ವರೆಗೆ ನಡೆಯಿತು. ಆದರೆ ಕೆಲವು ಬೂತ್‌ಗಳಲ್ಲಿ 6 ಗಂಟೆಯ ವೇಳೆಗೆ ಸರತಿ ಸಾಲು ಕಂಡುಬಂದ ಹಿನ್ನೆಲೆಯಲ್ಲಿ ಟೋಕನ್ ವ್ಯವಸ್ಥೆ ಅಳವಡಿಸಿ ನಂತರವೂ ಮತದಾನಕ್ಕೆ ಆವಕಾಶ ಕಲ್ಪಿಸಲಾಯಿತು.

ಈ ಮಧ್ಯೆ ಜಿಲ್ಲೆಯ ಕೆಲವೆಡೆಗಳಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಘಟನೆಗಳು ನಡೆದಿದ್ದು, ಕಾಞಂಗಾಡಿನಲ್ಲಿ ಮಲೆಯಾಳ ಪತ್ರಕರ್ತನೊಬ್ಬನಿಗೆ ಹಲ್ಲೆ ನಡೆಸಿದ ಘಟನೆಯೂ ವರದಿಯಾಗಿದೆ.

ಪುತ್ತಿಗೆ ಗ್ರಾಮ ಪಂಚಾಯತ್‌ನ ಒಂದನೇ ವಾರ್ಡ್‌ನಲ್ಲಿ ಸಿಪಿಎಂ ಕಾರ್ಯಕರ್ತನೋರ್ವ ನಕಲಿ ಮತದಾನಕ್ಕೆ ಯತ್ನಿಸಿದ್ದು, ಬಿಜೆಪಿ ಕಾರ್ಯಕರ್ತರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಆತನನ್ನು ಪೊಲೀಸರಿಗೊಪ್ಪಿಸಲಾಯಿತು. ಇದೇ ವೇಳೆ ಕೆಲವು ಮತಗಟ್ಟೆಗಳಲ್ಲಿ ಮತದಾನ ಯಂತ್ರಗಳು ಕೈಗೊಟ್ಟ ಘಟನೆಗಳು ನಡೆದಿವೆ. ಕೆಲವೆಡೆ ಯಂತ್ರಗಳು ತಡವಾಗಿ ಕಾರ್ಯಾರಂಭಗೊಂಡಿದ್ದು, ಮತದಾರರು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲುವಂತಾಯಿತು.

ಡಿ.13ರಂದು ಮತ ಎಣಿಕೆ ಕಾರ್ಯ
ಕಾಸರಗೋಡು ಜಿಲ್ಲೆಯಲ್ಲಿ ನಡೆದ ಚುನಾವಣೆಯ ಅಂಗವಾಗಿ ಮತ ಎಣಿಕೆ ಕಾರ್ಯವು ಡಿ.13ರಂದು ನಿಗದಿಪಡಿಸಿದ ಕೇಂದ್ರಗಳಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ಏರ್ಪಡಿಸಲಾಗಿದೆ. ನಂತರ ಮತಯಂತ್ರಗಳಲ್ಲಿ ಭದ್ರವಾಗಿರುವ ಮತಗಳ ಎಣಿಕೆ ಜರಗಲಿದೆ. ಈ ನಿಟ್ಟಿನಲ್ಲಿ ತರಬೇತಿ ಪಡೆದ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ನೇತೃತ್ವ ವಹಿಸಲಿದ್ದಾರೆ.

error: Content is protected !!