ಹೊಸ ಮನೆಯಲ್ಲಿ ವಾಸಿಸುವ ಖುಷಿಯಲ್ಲಿ ʼಸಾವಿನ ವಿಮಾನʼವನ್ನೇರಿದ್ದ ಕೇರಳದ ನರ್ಸ್‌ ರಂಜಿತಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಜರಾತ್​ನ ಅಹಮದಾಬಾದ್​ನಲ್ಲಿ ಗುರುವಾರ ಸಂಭವಿಸಿದ ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಕೇರಳದ ಪುಲ್ಲಾಡ್​ ಮೂಲದ ರಂಜಿತಾ ಗೋಪಕುಮಾರ್​ ಸಾವನ್ನಪ್ಪಿದ್ದಾರೆ.

ರಂಜಿತಾ ಪತ್ತನಂತಿಟ್ಟ ಜಿಲ್ಲೆಯಲ್ಲೇ ಸರ್ಕಾರಿ ಉದ್ಯೋಗದಲ್ಲಿದ್ದರು. ಆದರೆ ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳಲು, ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಪಡೆದು ಮಕ್ಕಳನ್ನು ನೋಡಲು ಬಂದಿದ್ದರು. ಈ ಹಿಂದೆ ಓಮನ್​ನ ಸಲಾಲ್​ನಲ್ಲಿ ಕೆಲಸ ಮಾಡಿದ್ದ ರಂಜಿತಾ, ಇದೀಗ ಲಂಡನ್​ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.

ಲಂಡನ್​ಗೆ ಹೋದ ಬಳಿಕ ಮತ್ತೆ ಮನೆಗೆ ಓಣಂ ಹಬ್ಬಕ್ಕೇ ಬರುವುದೆಂದು ಅವರು ಪ್ಲಾನ್​ ಕೂಡ ಮಾಡಿಕೊಂಡಿದ್ದರು. ಅವರು ಕಳೆದ ಎಂಟು ತಿಂಗಳಿನಿಂದ ಯುಕೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕೇರಳದಲ್ಲಿ ಹೊಂದಿದ್ದ ಸರ್ಕಾರಿ ಕೆಲಸವನ್ನು ನವೀಕರಿಸುವ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಇತ್ತೀಚೆಗೆ ಭಾರತಕ್ಕೆ ಮರಳಿದ್ದರು.

ತಮ್ಮೆಲ್ಲ ಕೆಲಸ-ಕಾರ್ಯಗಳನ್ನು ಮುಗಿಸಿಕೊಂಡ ರಂಜಿತಾ ಕೊಚ್ಚಿಯಿಂದ ಗುಜರಾತ್​ನ ಅಹಮದಾಬಾದ್​ಗೆ ತೆರಳಿದ್ದರು. ಬಳಿಕ ಅಹಮದಾಬಾದ್​ನಿಂದ ಲಂಡನ್​ಗೆ ತೆರಳಲು ಏರ್​ ಇಂಡಿಯಾ ವಿಮಾನವೇರಿದ್ದರು. ಆದರೆ ತನ್ನ ಕುಟುಂಬಕ್ಕಾಗಿ ಪಟ್ಟ ಕಷ್ಟ, ಹೊತ್ತ ಕನಸುಗಳು ವಿಮಾನ ಟೇಕ್​ಆಪ್​​ ಆದ ಕೆಲವೇ ನಿಮಿಷಗಳಲ್ಲಿ ನುಚ್ಚುನೂರಾಗಿದೆ.

ಐದು ವರ್ಷಗಳ ಹಿಂದೆ ಪಟ್ಟಣಂತಿಟ್ಟ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಅವರು ದೀರ್ಘ ರಜೆಯಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಪುಲ್ಲಾಡ್‌ನಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದರು ಮತ್ತು ಶೀಘ್ರದಲ್ಲೇ ತಮ್ಮ ಮಕ್ಕಳೊಂದಿಗೆ ಅಲ್ಲಿ ವಾಸಿಸುವ ಕನಸು ಕಂಡಿದ್ದರು.

ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ, ಅವರು ಲಂಡನ್ ಗೆ ಹಿಂತಿರುಗುತ್ತಿದ್ದಾಗ ದುರಂತ ಸಂಭವಿಸಿತು ಎಂದು ಕೆಪಿಸಿಸಿ ಕಾರ್ಯದರ್ಶಿ ಮತ್ತು ಕುಟುಂಬದ ಆಪ್ತ ಸಹಾಯಕ ಅನೀಶ್ ವಾರಿಕನ್ನಮಲ ಹೇಳಿದರು.

ರಂಜಿತಾ ಅವರಿಗೆ ತಾಯಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಹೊಸ ಮನೆಯ ನಿರ್ಮಾಣ ಕಾರ್ಯ ಮುಕ್ಕಾಲು ಭಾಗದಷ್ಟು ಪೂರ್ಣಗೊಂಡಿದೆ. ಅಲ್ಲಿನ ಸ್ಥಳೀಯ ನಿವಾಸಿ ಮತ್ತು ಸಾರ್ವಜನಿಕ ಕಾರ್ಯಕರ್ತ ಅನೀಶ್​ ಅವರು ಪ್ರತಿಕ್ರಿಯಿಸಿದ್ದಾರೆ. “ರಂಜಿತಾ ಅವರು ವಿದೇಶಕ್ಕೆ ತೆರಳಲು ನಿರ್ಧರಿಸಿದ್ದರು. ಅವರಿಗೆ 10ನೇ ತರಗತಿಯಲ್ಲಿ ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳಿದ್ದಾರೆ. ನಿನ್ನೆ ಅವರ ಸಂಬಂಧಿಕರು ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದರು” ಎಂದು ತಿಳಿಸಿದ್ದಾರೆ.

ಮನೆ ಬಿಟ್ಟ ಅಮ್ಮ ಲಂಡನ್​ ತಲುಪುತ್ತಾರೆ, ಓಣಂಗೆ ಮರಳಿ ಬರಲಿದ್ದಾರೆ ಎಂದು ಮಕ್ಕಳು ನಂಬಿದ್ದರು. ಆದರೆ ಅವರ ಸಾವಿನ ಸುದ್ದಿ ಕೇಳಿದಾಗ ಆಘಾತಕ್ಕೊಳಗಾದ ಮನೆಯವರ ರೋದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ವಿದೇಶಕ್ಕೆ ಹೊರಟಿದ್ದ ರಂಜಿತಾ ದೇಶದ ಗಡಿ ದಾಟುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!