ಕೇರಳದ ಅಟ್ಟಪಾಡಿ ಮಧು ಹತ್ಯೆ ಪ್ರಕರಣ: 14 ಮಂದಿ ತಪ್ಪಿತಸ್ಥರು ಎಂದ ಕೋರ್ಟ್, ನಾಳೆ ಶಿಕ್ಷೆ ಪ್ರಕಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಕೇರಳದ (Kerala) ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಮಧು ಹತ್ಯೆ ಪ್ರಕರಣದಲ್ಲಿ (Attappady Madhu lynching case) 14 ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಇಬ್ಬರನ್ನು ಖುಲಾಸೆ ಮಾಡಲಾಯಿತು.

ಘಟನೆ ನಡೆದು 5 ವರ್ಷಗಳ ಬಳಿಕ ಮಣ್ಣಾರ್​​ಕ್ಕಾಡ್ (mannarkkad) ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮಣ್ಣಾರ್​​ಕ್ಕಾಡ್ ಎಸ್ಸಿ-ಎಸ್ಟಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರತೀಶ್ ಕುಮಾರ್ ಪ್ರಕರಣದ ತೀರ್ಪು ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ 4ನೇ ಮತ್ತು 11ನೇ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ 16 ಮಂದಿ ಆರೋಪಿಗಳಿದ್ದಾರೆ. ತಪ್ಪಿತಸ್ಥರಿಗೆ ಬುಧವಾರ ಶಿಕ್ಷೆ ವಿಧಿಸಲಾಗುವುದು.

ಮಧು ಹತ್ಯೆ ಪ್ರಕರಣದಲ್ಲಿ ಮಾರ್ಚ್ 10 ರಂದು ವಿಚಾರಣೆ ಪೂರ್ಣಗೊಂಡಿತು. ಮಾರ್ಚ್ 18 ರಂದು ತೀರ್ಪು ನೀಡುವುದಾಗಿ ಘೋಷಿಸಲಾಗಿತ್ತು, ಆದರೆ ಮಾರ್ಚ್ 30 ಕ್ಕೆ ಮುಂದೂಡಲಾಯಿತು.ಮಾರ್ಚ್ 30ರಂದು ಪ್ರಕರಣದ ವಿಚಾರಣೆ ನಡೆದಾಗ ಏಪ್ರಿಲ್4ರಂದು ತೀರ್ಪು ಪ್ರಕಟಿಸಲು ಮತ್ತೆ ಮುಂದೂಡಲಾಗಿತ್ತು. ಮಧು ಅವರ ತಾಯಿ ಮಲ್ಲಿ ಹಾಗೂ ಸಹೋದರಿ ಸರಸು ಅವರಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಮಧು ಅವರ ತಾಯಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದಲ್ಲಿ 16 ಆರೋಪಿಗಳಿದ್ದರು. ಹನ್ನೊಂದು ತಿಂಗಳ ಸಾಕ್ಷ್ಯದ ನಂತರ ಪ್ರಕರಣದ ತೀರ್ಪು ಪ್ರಕಟಿಸಲಾಗಿದೆ. ಪ್ರಕರಣದಲ್ಲಿ 127 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದರೂ, ಅವರಲ್ಲಿ 24 ಮಂದಿ ಮಾತು ಬದಲಿಸಿದ್ದಾರೆ.

ಏನಿದು ಪ್ರಕರಣ?

2018ರ ಫೆ.22ರಂದು ಅಟ್ಟಪಾಡಿ ಚಿಂಡೇರಿ ಊರಿನ ಮಲ್ಲನ್‌ ಮತ್ತು ಮಲ್ಲಿ ದಂಪತಿಯ ಪುತ್ರ ಮಧು (30) ಗುಂಪು ದಾಳಿಗೆ ಬಲಿಯಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಿರುವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಮುಕ್ಕಾಲಿಗೆ ಕರೆತಂದಿತ್ತು. ಮಧುವನ್ನು ಮುಕ್ಕಾಲಿ ಸಮೀಪದ ಕಾಡಿನೊಳಗಿಂದ ಹಿಡಿದು ಆರೋಪಿಗಳು ಅಮಾನುಷವಾಗಿ ಥಳಿಸಿದ್ದಾರೆ. ಅಕ್ಕಿ ಕದ್ದಿದ್ದಾನೆಂದು ಆರೋಪಿಸಿ ಆಂಡಿಯಾಲಚಲದಲ್ಲಿ ಮಧು ವಾಸವಿದ್ದ ಸ್ಥಳದಿಂದ ಪತ್ತೆಯಾದ ಅಕ್ಕಿ, ಮಾಲನ್ನು ಮೂಟೆ ಕಟ್ಟಿ ಮಧು ಅವರ ಹೆಗಲ ಮೇಲೆ ಹಾಕಿ ಆರೋಪಿಗಳು ಮುಕ್ಕಾಲಿಗೆ ಕರೆತಂದು ಗುಂಪು ಸೇರಿ ಥಳಿಸಿದ್ದರು. ಮುಕ್ಕಾಲಿಗೆ ತಲುಪಿದ ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡಿದ್ದರು. ಅಗಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಷ್ಟರಲ್ಲಿ ಮಧು ಮೃತಪಟ್ಟಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!