ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆ ಕೇಸ್: ಮೂವರು ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

2020ರ ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು 7 ವರ್ಷಗಳ ಕಾಲದ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

ಎ14 – ಇಕ್ರಮುದ್ದೀನ್ ಸೈಯದ್ ನವೀದ್, ಎ16 – ಸೈಯದ್ ಆಸಿಫ್, ಎ18 – ಮೊಹಮ್ಮದ್ ಅತೀಫ್ ಎಂಬ ಮೂವರು ಆರೋಪಿಗಳು ಕೋರ್ಟ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಎನ್ಐಎ ವಿಶೇಷ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.

ಈ ಪ್ರಕರಣದ ವಿಚಾರಣೆಯಲ್ಲಿ ಎನ್ಐಎ ಪರವಾಗಿ ಹಿರಿಯ ಸರ್ಕಾರಿ ವಕೀಲರಾದ ಪ್ರಸನ್ನ ಕುಮಾರ್ ವಾದಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 138 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಇವರಲ್ಲಿ ಮೊದಲಿಗೆ ಈ 3 ಮಂದಿ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ.

2020ರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾದ ಎಂಬ ಕಾರಣ ನೀಡಿ ಹಲವಾರು ಜನರು ಕೆ.ಜಿ.ಹಳ್ಳಿ ಮತ್ತು ಡಿಜೆ.ಹಳ್ಳಿ ಪೊಲೀಸ್ ಠಾಣೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಈ ವೇಳೆ ಸಾರ್ವಜನಿಕ ಆಸ್ತಿ, ವಾಹನಗಳು ಮತ್ತು ದಾಖಲೆಗಳಿಗೆ ಭಾರಿ ಹಾನಿಯುಂಟಾಗಿತ್ತು.

ಈ ಪ್ರಕರಣವನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಎನ್ಐಎಗೆ ಪ್ರಕರಣ ಹಸ್ತಾಂತರಿಸಿತ್ತು. ಇನ್ನೂ 135ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀರ್ಪುಗಳು ಹೊರಬರುವ ನಿರೀಕ್ಷೆಯಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!