ಕೆಜಿಎಫ್‌ ಬಾಬುಗೆ ಆರ್‌ಟಿಓ ಶಾಕ್‌: ಬಾಲಿವುಡ್‌ ನಟರಿಂದ ಖರೀದಿಸಿದ ಕಾರ್‌ಗಳಿಂದ ಸಂಕಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉದ್ಯಮಿ ಕೆಜಿಎಫ್‌ ಬಾಬು ಅವರಿಗೆ ಆರ್‌ಟಿಓ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿರುವ ತಮ್ಮ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಮಿತಾಬ್ ಬಚ್ಚನ್, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್‌ ಕಾರುಗಳನ್ನು ಸೀಜ್‌ ಮಾಡಲು ಮುಂದಾಗಿದ್ದಾರೆ.

ಕೆಜಿಎಫ್ ಬಾಬುಗೆ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳ ಕಾರು ಎಂದರೆ ಅವರು ಖರೀದಿಸಿ ತರುತ್ತಾರೆ. ಕೆಜಿಎಫ್ ಬಾಬು ಬಳಿ ಎರಡು ರೋಲ್ಸ್ ರಾಯ್ಸ್ ಕಾರಿದೆ. ಅಮಿತಾಭ್ ಬಚ್ಚನ್ ಬಳಸುತ್ತಿದ್ದ MH 11 AX 1 ಹಾಗೂ ಆಮಿರ್ ಖಾನ್ ಒಂದು ವರ್ಷ ಮಾತ್ರ ಬಳಸಿದ್ದ MH 02 BB 2 ಸಂಖ್ಯೆಯ ಕಾರನ್ನು ಕೆಜಿಎಫ್ ಬಾಬು ಖರೀದಿಸಿ ತಂದಿದ್ದರು.

ಈಗ ಬಾಬು ತೆರಿಗೆ ಕಟ್ಟದ ಕಾರಣ ಆರ್​ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ಬಾಬು ಮನೆಯ ಮೇಲೆ ದಾಳಿ ನಡೆಸಿತು. ಈ ವೇಳೆ ಗೇಟ್​ ತೆಗೆಯದೆ ಕೆಜಿಎಫ್ ಬಾಬು ಮೊಂಡಾಟ ಪ್ರದರ್ಶಿಸಿದರು. ಹೀಗಾಗಿ, ಕೆಲ ಹೊತ್ತು ಅವರ ಮನೆ ಮುಂದೆಯೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಆರ್​ಟಿಒ ಅಧಿಕಾರಿಗಳಿಗೆ ಬಂತು.

ಘಟನೆ ಬಗ್ಗೆ ಬಾಬು ಪ್ರತಿಕ್ರಿಯಿಸಿದ್ದಾರೆ. ‘ನಾನು ಟ್ಯಾಕ್ಸ್ ಕಟ್ಟಲು ಸಿದ್ಧನಿದ್ದೇನೆ. ನನ್ನ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿದೆ. 2 ಕಾರುಗಳಿಗೆ ಮಹಾರಾಷ್ಟ್ರದಲ್ಲಿ ಲೈಫ್​ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ. ಈಗ RTO ಅಧಿಕಾರಿಗಳು ಕರ್ನಾಟಕ ತೆರಿಗೆ ಕಟ್ಟಿ ಎನ್ನುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ. ಆರ್​ಟಿಒ ಈಗ ಅವಕಾಶ ಕೊಟ್ಟರೆ ಈಗಲೇ ತೆರಿಗೆ ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ.

ಕಾರುಗಳ ಮೇಲೆ ಎಂಎಲ್​ಸಿ ಪಾಸ್ ಪತ್ತೆ ಆಗಿದೆ. ನಜೀರ್ ಅಹ್ಮದ್ ಅವರ ಪಾಸ್ ಅನ್ನು ತಮ್ಮ ಕಾರಿಗೆ ಹಾಕಿಕೊಂಡು ಅವರು ಓಡಾಡುತ್ತಿದ್ದರು. ರೋಲ್ಸ್ ರಾಯ್ಸ್, ಫೋರ್ಡ್ ಕಾರಿನ ಮೇಲೆ ಎಂಎಲ್​ಸಿ ಪಾಸ್ ಕಾಣಿಸಿದೆ. ಮಾಧ್ಯಮದವರು ನೋಡುತ್ತಿದ್ದಂತೆ ಪಾಸ್ ತೆರವು ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!