ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸ್ತೀವಿ ಎಂದು ಪೋಷಕರಿಗೆ ವಂಚಿಸಿದ ಖದೀಮರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮ್ಮ ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್‌ಸ್ಟೆಬಲ್ ವೊಬ್ಬರು ಮಹಿಳೆಯೊಬ್ಬರಿಗೆ 47 ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ.

ಆರೋಪಿಯನ್ನು ನಗರದ ಸಿಎಆರ್ ನಲ್ಲಿರುವ ಹೆಡ್ ಕಾನ್‌ಸ್ಟೆಬಲ್ ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ದೀಪಾ ಮತ್ತು ಇತರ ಇಬ್ಬರು ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಿವಾಸಿ ಭಾಗ್ಯಮ್ಮ ದೂರು ದಾಖಲಿಸಿದ್ದಾರೆ. 2021 ರಲ್ಲಿ ಭಾಗ್ಯಮ್ಮ ಅವರು ಪ್ರಶಾಂತ್ ಕುಮಾರ್ ಅವರನ್ನು ಭೇಟಿಯಾದಾಗ, ತಾನು ಸರ್ಕಾರಿ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ನಿಮ್ಮ ಮಗ ಮತ್ತು ಮಗಳಿಗೆ ಸರ್ಕಾರಿ ಉದ್ಯೋಗವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು.

ಮೂರು ತಿಂಗಳೊಳಗೆ ನೇರ ನೇಮಕಾತಿಯ ಮೂಲಕ ಅವರ ಮಗನಿಗೆ ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ) ಹುದ್ದೆ ಮತ್ತು ಅವರ ಮಗಳಿಗೆ ಪ್ರಥಮ ವಿಭಾಗದ ಸಹಾಯಕ (ಎಫ್‌ಡಿಎ) ಹುದ್ದೆ ಸಿಗಲಿದೆ ಎಂದು ಅವರು ಭರವಸೆ ನೀಡಿದರು. ಇದಕ್ಕೆ ಪ್ರತಿಯಾಗಿ ಎಫ್ ಡಿಎ ಹುದ್ದೆಗೆ 25 ಲಕ್ಷ ಹಾಗೂ ಎಸ್ ಡಿಎ ಹುದ್ದೆಗೆ 15 ಲಕ್ಷ ರೂಪಾಯಿ ನೀಡಲು ಮಹಿಳೆ ಮತ್ತು ಆಕೆಯ ಪತಿ ನಗರದ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದು ಕಂತುಗಳಲ್ಲಿ ಹಣವನ್ನು ಪಾವತಿಸಿದ್ದಾರೆ.

ಕಳೆದ ಏಪ್ರಿಲ್ 2024 ರಲ್ಲಿ, ಪ್ರಶಾಂತ್ ಕುಮಾರ್ ಭಾಗ್ಯಮ್ಮ ಅವರ ಮಗ ಪ್ರಶಾಂತ್ ಅವರನ್ನು ಎಂಎಸ್ ಬಿಲ್ಡಿಂಗ್ ಬಳಿ ಭೇಟಿಯಾಗುವಂತೆ ಹೇಳಿ ಅವರಿಗೆ ನೇಮಕಾತಿ ಪತ್ರಗಳನ್ನು ನೀಡಿದರು, ನಂತರ ಅದನ್ನು ಪರಿಶೀಲನೆ ಮಾಡಿ ನೋಡಿದಾಗ ನಕಲಿ ಎಂದು ತಿಳಿದುಬಂದಿದೆ. ಭಾಗ್ಯಮ್ಮ ಅವರ ಮನೆಯವರು ಕುಮಾರ್ ಮತ್ತು ದೀಪಾ ಅವರನ್ನು ಈ ಬಗ್ಗೆ ಕೇಳಿ ಆಕ್ಷೇಪಿಸಿದಾಗ ಚೆಕ್ ನೀಡಿದರು. ಆದರೆ, ಭಾಗ್ಯಮ್ಮ ಅದನ್ನು ಬ್ಯಾಂಕ್ ಗೆ ಹಾಕಿ ಹಣ ಪಡೆಯಲು ಯತ್ನಿಸಿದಾಗ ಚೆಕ್ ಬೌನ್ಸ್ ಆಗಿದೆ. ನಂತರ 47 ಲಕ್ಷ ರೂಪಾಯಿ ವಾಪಸ್ ಕೊಡುವಂತೆ ಕುಟುಂಬದವರು ಕುಮಾರ್‌ಗೆ ಕೇಳಿದಾಗ ಬೆದರಿಕೆ ಹಾಕಿದ್ದರು.

ನಂದಿನಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!