ಹೊಸದಿಗಂತ ಡಿಜಿಟಲ್ ಡೆಸ್ಕ್:
2025ಕ್ಕೆ ವಿದಾಯ ಹೇಳಿ 2026ನ್ನು ಜನರು ಸಂಭ್ರಮದಿಂದ ಸ್ವಾಗತಿಸಿದ ಬೆನ್ನಲ್ಲೇ, ಹೊಸ ವರುಷದ ಆಚರಣೆಗಳಿಗೆ ಪೊಲೀಸರು ಅಡ್ಡಿಪಡಿಸಿದ ಘಟನೆಗಳು ಬೆಳಕಿಗೆ ಬಂದಿವೆ. ಪಾರ್ಟಿ ಮತ್ತು ಸಂಭ್ರಮದಲ್ಲಿ ತೊಡಗಿದ್ದವರಿಗೆ ಖಾಕಿ ಪಡೆ ಅಚ್ಚರಿಯ ಶಾಕ್ ನೀಡಿದೆ.
ಹೊಸ ವರುಷದ ಸಂಭ್ರಮದ ನಡುವೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯಲ್ಲಿ ಖಾಸಗಿ ರೆಸಾರ್ಟ್ ಮೇಲೆ ದಾಳಿ ನಡೆದಿದೆ. ಹೆಗ್ಗಡಿಹಳ್ಳಿ ಸಮೀಪದ ಈಚೀಸ್ ರೆಸಾರ್ಟ್‌ನಲ್ಲಿ ಯಾವುದೇ ಅನುಮತಿ ಇಲ್ಲದೆ ಪಾರ್ಟಿ ಆಯೋಜಿಸಲಾಗಿತ್ತು ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 40ಕ್ಕೂ ಹೆಚ್ಚು ಯುವಕರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಸ್ಥಳದಿಂದ ಸಾಕಷ್ಟು ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಕ್ರಮದ ಬಳಿಕ ರೆಸಾರ್ಟ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.
ಇನ್ನೊಂದೆಡೆ, ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಹೊಸ ವರುಷದ ಸಂಭ್ರಮ ಗಲಾಟೆಯಾಗಿ ಮಾರ್ಪಟ್ಟ ಘಟನೆ ನಡೆದಿದೆ. ಮದ್ಯಪಾನದ ಅಮಲಿನಲ್ಲಿ ಇದ್ದ ಯುವಕ ಯುವತಿಯರ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಗಲಾಟೆ ವೇಳೆ ಯುವಕ ಕೆಳಗೆ ಬಿದ್ದು ತಲೆಗೆ ಗಾಯಗೊಂಡಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಕರಣ ಸಂಬಂಧ ಯುವಕನ ಜೊತೆ ಇನ್ನೂ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

