March 4, 2026
Wednesday, March 4, 2026
spot_img

ಮರ್ಡರ್ ಮಿಸ್ಟರಿ ಭೇದಿಸಿದ ಖಾಕಿ: ಆಸ್ಪತ್ರೆಗೆಂದು ಕರೆದೊಯ್ದು ವೃದ್ಧೆಯ ರುಂಡ ಕತ್ತರಿಸಿದ ಪಾಪಿ ಅರೆಸ್ಟ್!

ಹೊಸದಿಗಂತ ಮುಂಡಗೋಡ:

ನಂಬಿದ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕಾಡಿಗೆ ಕರೆದೊಯ್ದು, ಕುತ್ತಿಗೆ ಕೊಯ್ದು ರುಂಡವನ್ನೇ ಸುಟ್ಟು ಹಾಕಿದ್ದ ಭೀಕರ ಕೊಲೆ ಪ್ರಕರಣವನ್ನು ಮುಂಡಗೋಡ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಳಗಿ ಗ್ರಾಮದ 75 ವರ್ಷದ ಶಿವಕ್ಕ ಪಾಟೀಲ ಎಂಬುವವರೇ ಕೊಲೆಯಾದ ದುರ್ದೈವಿ. ಈ ಸಂಬಂಧ ಸೊರಬ ಮೂಲದ 45 ವರ್ಷದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಫೆಬ್ರವರಿ 20ರಂದು ಕೊಳಗಿ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದ ಮತ್ತು ಬಟ್ಟೆಗಳಿಲ್ಲದ ಮಹಿಳೆಯ ಶವ ಪತ್ತೆಯಾಗಿತ್ತು. ಗುರುತು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಜಿಲ್ಲಾ ಎಸ್‌.ಪಿ ದೀಪನ್‌ ಎಂ.ಎನ್‌. ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದ ಪೊಲೀಸರು, ತನಿಖೆ ಚುರುಕುಗೊಳಿಸಿ ಅದು ಶಿವಕ್ಕ ಪಾಟೀಲರ ಶವ ಎಂದು ಪತ್ತೆಹಚ್ಚಿದರು.

ಪೊಲೀಸರ ವಶದಲ್ಲಿರುವ ಆರೋಪಿಯು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನವನಾಗಿದ್ದು, ಮಳಗಿ ಗ್ರಾಮದಲ್ಲಿರುವ ತನ್ನ ಪತ್ನಿಯ ತವರು ಮನೆಯಲ್ಲಿ ನೆಲೆಸಿದ್ದ. ಈತ ಈಗಾಗಲೇ ಒಂದು ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಕ್ರಿಮಿನಲ್ ಎನ್ನಲಾಗಿದೆ.

ಒಂಟಿಯಾಗಿದ್ದ ಶಿವಕ್ಕನ ಬಂಗಾರದ ಒಡವೆಗಳ ಮೇಲೆ ಕಣ್ಣಿಟ್ಟಿದ್ದ ಈತ, ಅವರ ನಂಬಿಕೆ ಗಳಿಸಿದ್ದ. ಆಸ್ಪತ್ರೆಗೆ ಹೋಗೋಣ ಬನ್ನಿ ಎಂದು ನಂಬಿಸಿ ಬೈಕ್ ಮೇಲೆ ಕೂರಿಸಿಕೊಂಡು ಕಾಡಿಗೆ ಕರೆದೊಯ್ದಿದ್ದಾನೆ. ಮಧ್ಯಾಹ್ನದ ಹೊತ್ತಿನಲ್ಲಿ ಅವರನ್ನು ಕೊಲೆ ಮಾಡಿ, ಅವರ ಮೈಮೇಲಿದ್ದ ಒಡವೆಗಳನ್ನು ದೋಚಿದ್ದಾನೆ. ಅಂದು ಸಂಜೆಯೇ ಮತ್ತೆ ಸ್ಥಳಕ್ಕೆ ಮರಳಿದ ಈತ, ಗುರುತು ಸಿಗಬಾರದೆಂಬ ಕಾರಣಕ್ಕೆ ಶವದ ರುಂಡವನ್ನು ಕತ್ತರಿಸಿ, ಬಟ್ಟೆಯಲ್ಲಿ ಸುತ್ತಿಕೊಂಡು ಹೋಗಿ ಹಾನಗಲ್ ಬಳಿ ಸುಟ್ಟು ಹಾಕಿದ್ದಾನೆ.

ಚೆಕ್‌ಪೋಸ್ಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಮತ್ತು ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಪೊಲೀಸರಿಗೆ ವರದಾನವಾಯಿತು. ಬೈಕ್ ಮೇಲೆ ವೃದ್ಧೆಯನ್ನು ಕರೆದುಕೊಂಡು ಹೋಗುತ್ತಿರುವುದು ದೃಢಪಟ್ಟಿದ್ದರಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ, ಸಿಪಿಐಗಳಾದ ರಂಗನಾಥ ನೀಲಮ್ಮನವರ ಮತ್ತು ಶ್ರೀಧರ ಎಸ್‌.ಆರ್‌ ನೇತೃತ್ವದ ತಂಡವು ಈ ರೋಚಕ ಕಾರ್ಯಾಚರಣೆ ನಡೆಸಿದೆ. ಸದ್ಯ ಆರೋಪಿ ಪೊಲೀಸರ ಅತಿಥಿಯಾಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !