ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ಎಂಬುದು ಮಿತಿಮೀರಿದಾಗ ಎಂತಹ ಅವಾಂತರಗಳಿಗೆ ಕಾರಣವಾಗುತ್ತದೆ ಎಂಬುದಕ್ಕೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಮಹಿಳೆಯೊಬ್ಬಳು ಪೊಲೀಸ್ ಇನ್ಸ್‌ಪೆಕ್ಟರ್‌ಗೇ ರಕ್ತದಲ್ಲಿ ಪತ್ರ ಬರೆದು ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ರಾಮಮೂರ್ತಿನಗರದ ನಿವಾಸಿಯಾದ ವನಜಾ ಎಂಬಾಕೆ ಅದೇ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದರು. ಇನ್ಸ್‌ಪೆಕ್ಟರ್‌ಗೆ ನಿರಂತರವಾಗಿ ಮೆಸೇಜ್ ಮಾಡುತ್ತಾ ಪ್ರೀತಿಸುವಂತೆ ಪೀಡಿಸುತ್ತಿದ್ದ ಈಕೆ, ಸತೀಶ್ ಅವರು ಆಕೆಯ ನಂಬರ್‌ಗಳನ್ನು ಬ್ಲಾಕ್ ಮಾಡಿದಾಗ ಮತ್ತಷ್ಟು ಅತಿರೇಕದ ವರ್ತನೆಗೆ ಇಳಿದಿದ್ದಾಳೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಹತ್ತಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳಿಂದ ಮೆಸೇಜ್ ಮಾಡಿ ಕಾಟ ಕೊಟ್ಟಿದ್ದಾಳೆ.
ಇತ್ತೀಚೆಗೆ ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದ ಸಮಯ ನೋಡಿ ಅವರ ಟೇಬಲ್ ಮೇಲೆ ಕಜ್ಜಾಯದ ಡಬ್ಬಿ, ಹೂವಿನ ಬೊಕ್ಕೆ ಹಾಗೂ ಎರಡು ಶೀಟ್ ಮಾತ್ರೆಗಳನ್ನು ಇಟ್ಟು ಹೋಗಿದ್ದಾಳೆ. ಇದರೊಂದಿಗೆ ತನ್ನ ರಕ್ತದಲ್ಲೇ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ “ಚಿನ್ನಿ ಲವ್ ಯೂ, ಯೂ ಮಸ್ಟ್ ಲವ್ ಮೀ” ಎಂದು ಬರೆದು ಹಾರ್ಟ್ ಚಿತ್ರ ಬಿಡಿಸಿದ್ದಾಳೆ. “ನೀವು ನನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನನ್ನ ಸಾವಿಗೆ ನೀವೇ ಕಾರಣ” ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾಳೆ.
ಮಹಿಳೆಯ ಈ ನಿರಂತರ ಕಿರುಕುಳ ಹಾಗೂ ಆತ್ಮಹತ್ಯೆಯ ಬೆದರಿಕೆಯಿಂದ ಬೇಸತ್ತ ಇನ್ಸ್‌ಪೆಕ್ಟರ್ ಸತೀಶ್, ಅಂತಿಮವಾಗಿ ಆಕೆಯ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಆತ್ಮಹತ್ಯೆ ಬೆದರಿಕೆ ಹಾಕಿದ ಆರೋಪದಡಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲೇ ವನಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

