ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸೆಂಬರ್ 13ರರೊಳಗಾಗಿ ಸಂಸತ್ತಿನ ಮೇಲೆ ದಾಳಿ ಮಾಡಲಾಗುವುದು ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ.
ಡಿಸೆಂಬರ್ 13ಕ್ಕೆ ಸಂಸತ್ತಿನ ಮೇಲೆ ದಾಳಿ ನಡೆದು 22 ವರ್ಷಗಳು ಕಳೆಯಲಿವೆ. ಅದಕ್ಕೂ ಮುನ್ನವೇ ಉಗ್ರ ಪನ್ನುನ್ ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸುವುದಾಗಿ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದಾನೆ.
ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಪನ್ನುನ್ ಬಿಡುಗಡೆ ಮಾಡಿರುವ ವಿಡಿಯೋದ ಪೋಸ್ಟರ್ನಲ್ಲಿ 2001ರ ಸಂಸತ್ತಿನ ದಾಳಿಯ ಅಪರಾಧಿ ಅಫ್ಜಲ್ ಗುರು ಫೋಟೋ ಇದೆ. ‘ದೆಹಲಿ ಬನೇಗಾ ಖಲಿಸ್ತಾನ್’ ಎಂಬ ವಿಡಿಯೋದ ಶೀರ್ಷಿಕೆಯನ್ನು ನೀಡಲಾಗಿದೆ. ಭಾರತೀಯ ಏಜೆನ್ಸಿಗಳು ತನ್ನನ್ನು ಕೊಲ್ಲುವ ಸಂಚು ವಿಫಲವಾಗಿದೆ ಎಂದು ಪನ್ನುನ್ ಸಂತಸದಿಂದ ಹೇಳಿದ್ದಾರೆ. ಅಲ್ಲದೆ ಡಿಸೆಂಬರ್ 13 ಅಥವಾ ಅದಕ್ಕೂ ಮುನ್ನ ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸುವುದಾಗಿ ಪನ್ನುನ್ ಘೋಷಿಸಿದ್ದಾನೆ.
ಡಿಸೆಂಬರ್ 5ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಖಾಲಿಸ್ತಾನಿ ಭಯೋತ್ಪಾದಕನ ಬೆದರಿಕೆ ಆತಂಕ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿವೆ.