ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಉಭಯ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಸಂದರ್ಭದಲ್ಲಿ ಮತ್ತೊಂದು ಘಟನೆ ನಡೆದಿದೆ. ಮತ್ತೊಬ್ಬ ಖಲಿಸ್ತಾನಿ ಭಯೋತ್ಪಾದಕ ಕೆನಡಾದಲ್ಲಿ ಹತ್ಯೆಗೀಡಾಗಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ. ಬುಧವಾರ ರಾತ್ರಿ ವಿನ್ನಿಪೆಗ್‌ನಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ ನಡೆಸಿದ ದಾಳಿಯಲ್ಲಿ ಭಯೋತ್ಪಾದಕ ಸುಕ್ ದೋಲ್ ಸಿಂಗ್ ಅಲಿಯಾಸ್ ಸುಖ ದುನೆಕೆ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಂಜಾಬ್‌ನ ಮೋಘಾ ಜಿಲ್ಲೆಯ ದೇವಿಂದರ್ ಬಾಂಬಿಹಾ ಗ್ಯಾಂಗ್‌ಗೆ ಸೇರಿದ ಸುಖ ದುನೆಕೆ 2017 ರಲ್ಲಿ ನಕಲಿ ದಾಖಲೆಗಳ ಮೇಲೆ ಭಾರತದಿಂದ ಕೆನಡಾಕ್ಕೆ ಪರಾರಿಯಾಗಿದ್ದರು. ಭಾರತದಲ್ಲಿ ಈ ಗ್ಯಾಂಗ್‌ಸ್ಟರ್ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳಿವೆ. ಗುಪ್ತಚರ ಮೂಲಗಳ ಪ್ರಕಾರ, ದುನಕೆ ಕೆನಡಾದ ಮಧ್ಯಭಾಗದಲ್ಲಿ ಕೆಲಸ ಮಾಡುತ್ತಿರುವ ಭಯೋತ್ಪಾದಕ ಅರ್ಷದೀಪ್ ಸಿಂಗ್ ಗ್ಯಾಂಗ್‌ಗೆ ಸೇರಿಕೊಂಡಿದ್ದು, ಖಲಿಸ್ತಾನಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ 29 ಗ್ಯಾಂಗ್‌ಸ್ಟರ್‌ಗಳು ಭಾರತದಲ್ಲಿನ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ವಿವಿಧ ದೇಶಗಳಿಗೆ ಓಡಿಹೋಗಿದ್ದಾರೆ. ಇವರೆಲ್ಲರೂ ನಕಲಿ ಪ್ರಯಾಣ ದಾಖಲೆಗಳೊಂದಿಗೆ ವಿವಿಧ ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಪೈಕಿ ಕೆನಡಾದಲ್ಲಿ 8 ಮಂದಿ, ಈ ಎಂಟು ಜನರಲ್ಲಿ ಸುಖ ದುನೆಕೆ ಕೂಡಾ ಒಬ್ಬ. ಉಳಿದಂತೆ ಅಮೆರಿಕದಲ್ಲಿ-11, ಆಸ್ಟ್ರೇಲಿಯಾದಲ್ಲಿ-2, ಪಾಕಿಸ್ತಾನ, ಯುಎಇ, ಹಾಂಗ್‌ಕಾಂಗ್, ಇಟಲಿ-ಪೋರ್ಚ್‌ಗಲ್, ಇಂಡೋನೇಷ್ಯಾ ಮತ್ತು ಜರ್ಮನಿಯಲ್ಲಿ ಒಬ್ಬರು. ಮಲೇಷ್ಯಾದಲ್ಲಿ-2 ಇರುವುದಾಗಿ ತಿಳಿದುಬಂದಿದೆ.