ಹೊಸದಿಗಂತ ವರದಿ, ಕಲಬುರಗಿ:
ಈ ದೇಶದಲ್ಲಿ ಹಿಂದುತ್ವ ಉಳಿದಿರುವುದು ಕೇವಲ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದಿಂದ ಮಾತ್ರ.ಅಂತಹ ಸಂಘಟನೆ ಬಗ್ಗೆ ಮಾತನಾಡುವ ಯೋಗ್ಯತೆ ಸಚಿವ ಪ್ರಿಯಾಂಕ್ ಖರ್ಗೆಗೆ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಪ್ರಿಯಾಂಕ್ ಖರ್ಗೆ ಅವರು ವಿನಾಕಾರಣ ಆರೆಸ್ಸೆಸ್ ಹಾಗೂ ಮೋದಿ ಮೇಲೆ ಟೀಕೆ ಮಾಡುತ್ತಿದ್ದಾರೆ.ಒಂದು ವೇಳೆ ಈ ದೇಶದಲ್ಲಿ ಆರೆಸ್ಸೆಸ್ ಇರದೇ ಹೋಗಿದ್ದರೆ, ನಮಗೆಲ್ಲರಿಗೂ ವಿಚಿತ್ರ ಪರಿಸ್ಥಿತಿಗೆ ತಂದೊಡ್ಡಿ ಮತಾಂತರ ಮಾಡುತ್ತಿದ್ದರು ಎಂದರು.
ಹಿಂದೆ ಮಹಾತ್ಮ ಗಾಂಧಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಘದ ಶಿಬಿರಗಳಿಗೆ ಹೋಗಿ,ನಮಗೆ ಜಾತಿಗಳನ್ನು ಹೊಗಲಾಡಿಸಲು ಸಾಧ್ಯವಾಗಿರಲಿಲ್ಲ.ಆದರೆ, ಸಂಘದ ಶಿಬಿರಗಳಲ್ಲಿ ಯಾವುದೇ ಕಾರಣಕ್ಕೂ ಜಾತಿ ನೋಡುವುದಿಲ್ಲ ಎಂಬುದು ನಮಗೆ ಹೆಮ್ಮೆ ಎನಿಸಿದೆ ಎಂದು ಹೇಳಿದ್ದಾರೆ ಎಂದು ಹೇಳಿದ ಅವರು,ಹೀಗಿರುವಾಗ ಆರೆಸ್ಸೆಸ್ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆಗೆ ಅವರಾರೂ ಎಂದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಿಡಿದಿರುವ ಹುಚ್ಚು ವಾಸಿ ಮಾಡಲು ಪ್ರಪಂಚದಲ್ಲಿ ಯಾವ ಆಸ್ಪತ್ರೆಯು ಇಲ್ಲ. ಮಿಂಚುಳದಷ್ಟು ಯೋಗ್ಯತೆ ಪ್ರಿಯಾಂಕ್ ಖರ್ಗೆಗಿಲ್ಲ ಎಂದು ಹೇಳಿದರು.