ಹೊಸದಿಗಂತ ಡಿಜಿಟಲ್ ಡೆಸ್ಕ್
ಸಂಸದ ಶಶಿ ತರೂರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಈ ಇಬ್ಬರಲ್ಲೊಬ್ಬರು ಇಂದು ಕಾಂಗ್ರೆಸ್ ನ ಅಧ್ಯಕ್ಷಗಾದಿಗೆ ಏರಲಿದ್ದಾರೆ. ಈ ಮೂಲಕ ಕಳೆದ 24 ವರ್ಷಗಳಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಗಾಂಧಿಯೇತರರೊಬ್ಬರು ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಪಕ್ಷವು ಅಧ್ಯಕ್ಷೀಯ ಚುನಾವಣೆಯ ಮತಗಳನ್ನು ಎಣಿಕೆ ಮಾಡಲು ಸಿದ್ಧವಾಗಿದೆ.
ಮೂರು ಬಾರಿ ಸಂಸದರಾಗಿದ್ದ ಮಾಜಿ ಸಚಿವ ಶಶಿ ತರೂರ್ ವಿರುದ್ಧ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗೆಲ್ಲುವ ಫೇವರಿಟ್ ಆಗಿದ್ದಾರೆ. ಮಧುಸೂದನ್ ಮಿಸ್ತ್ರಿ ನೇತೃತ್ವದ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರವು ಮತ ಎಣಿಕೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ರಾಜ್ಯಗಳ ಮತಪೆಟ್ಟಿಗೆಗಳು ಕಾಂಗ್ರೆಸ್ ಕೇಂದ್ರ ಕಚೇರಿಗೆ ತಲುಪಿದ್ದು, ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ.
ಬುಧವಾರ ಬೆಳಗ್ಗೆ ಎರಡೂ ಅಭ್ಯರ್ಥಿಗಳ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಸೀಲ್ ಮಾಡಿದ ಬಾಕ್ಸ್ಗಳನ್ನು ತೆರೆಯಲಾಗುವುದು. ಆ ಬಲಿಕ ಎಲ್ಲಾ ಮತಗಳ ಮತ ಎಣಿಕೆ ಆರಂಭವಾಗಲಿದೆ.
ಸಂಜೆ ವೇಳೆಗೆ ಫಲಿತಾಂಶ ಬರುವ ನಿರೀಕ್ಷೆ ಇದೆ. 9,915 ಪ್ರತಿನಿಧಿಗಳಲ್ಲಿ ಒಟ್ಟು 9,497 ಮಂದಿ ದೆಹಲಿ ಮತ್ತು ರಾಜ್ಯ ಪ್ರಧಾನ ಕಚೇರಿಗಳಲ್ಲಿ ಮತ ಚಲಾಯಿಸಿದ್ದಾರೆ. ಕರ್ನಾಟಕದ ಭಾರತ್ ಜೋಡೋ ಯಾತ್ರಾ ಶಿಬಿರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಮತದಾರರು ತಮ್ಮ ಮತ ಚಲಾಯಿಸಲು ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಮತದಾರರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ಪಿ. ಚಿದಂಬರಂ ಪ್ರಮುಖರಾಗಿದ್ದರು. ಖರ್ಗೆ ಬೆಂಗಳೂರಿನಲ್ಲಿ ಮತ ಚಲಾಯಿಸಿದರೆ, ತರೂರ್ ತಿರುವನಂತಪುರದಲ್ಲಿ ಮತ ಚಲಾಯಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ