January16, 2026
Friday, January 16, 2026
spot_img

ಕ್ಯಾಬ್ ಚಾಲಕರ ಹೋರಾಟಕ್ಕೆ ಮಣಿದ KIAL: ಪಿಕಪ್ ಸಮಯ ಏರಿಕೆ, ದಂಡದ ಮೊತ್ತ ಕಡಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಳದಿ ಬೋರ್ಡ್ ವಾಹನಗಳಿಗೆ ವಿಧಿಸಲಾಗಿದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಿ ವಿಮಾನ ನಿಲ್ದಾಣ ಆಡಳಿತ ಮಂಡಳಿ ಹೊಸ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಪಡಿಸಿದ್ದ ಪಿಕಪ್ ಸಮಯವನ್ನು ಹೆಚ್ಚಿಸಿರುವುದಲ್ಲದೆ, ದಂಡದ ಮೊತ್ತವನ್ನು ಅರ್ಧದಷ್ಟು ಇಳಿಕೆ ಮಾಡುವ ಮೂಲಕ ಚಾಲಕರಿಗೆ ನೆಮ್ಮದಿ ನೀಡಲಾಗಿದೆ.

ಟರ್ಮಿನಲ್ 1ರ P3 ಮತ್ತು P4 ಪಾರ್ಕಿಂಗ್ ವಲಯಗಳಲ್ಲಿ ಹಳದಿ ಬೋರ್ಡ್ ಕ್ಯಾಬ್‌ಗಳ ಉಚಿತ ಪಿಕಪ್ ಸಮಯವನ್ನು ಈ ಹಿಂದೆ ಇದ್ದ 10 ನಿಮಿಷಗಳಿಂದ 15 ನಿಮಿಷಗಳಿಗೆ ಹೆಚ್ಚಿಸಲಾಗಿದೆ.

ಒಂದು ವೇಳೆ 15 ನಿಮಿಷಗಳ ಉಚಿತ ಸಮಯ ಮೀರಿದರೆ, ಮುಂದಿನ 45 ನಿಮಿಷಗಳವರೆಗೆ ಈ ಮೊದಲು ಇದ್ದ ದಂಡದ ದರವನ್ನು ಪರಿಷ್ಕರಿಸಲಾಗಿದೆ. 45 ನಿಮಿಷ ಮೀರಿದ ನಂತರ ಪ್ರತಿ ಗಂಟೆಗೆ ವಿಧಿಸುತ್ತಿದ್ದ 100 ರೂ. ದಂಡವನ್ನು ಈಗ 50 ರೂ.ಗೆ ಇಳಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಇಡೀ ದಿನ ವಾಹನ ನಿಲ್ಲಿಸಿದರೆ ವಿಧಿಸಲಾಗುತ್ತಿದ್ದ 600 ರೂ. ಪಾರ್ಕಿಂಗ್ ದರವನ್ನು ಈಗ 350 ರೂ.ಗೆ ಕಡಿತಗೊಳಿಸಲಾಗಿದೆ.

ಮೊದಲು ಕೇವಲ 8 ನಿಮಿಷಗಳ ಉಚಿತ ಸಮಯ ನೀಡಿ, ನಂತರ 150 ರೂ. ದಂಡ ವಿಧಿಸುವ ನಿಯಮ ತರಲಾಗಿತ್ತು. ಇದನ್ನು ವಿರೋಧಿಸಿ ನೂರಾರು ಟ್ಯಾಕ್ಸಿ ಚಾಲಕರು ಏರ್ಪೋರ್ಟ್ ಟೋಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರಯಾಣಿಕರ ದಟ್ಟಣೆ ಮತ್ತು ಟರ್ಮಿನಲ್ ತಲುಪಲು ತೆಗೆದುಕೊಳ್ಳುವ ಸಮಯವನ್ನು ಪರಿಗಣಿಸದೆ ಇಂತಹ ನಿಯಮ ಹೇರಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರತಿದಿನ ಸುಮಾರು 1.3 ಲಕ್ಷ ಪ್ರಯಾಣಿಕರು ಮತ್ತು 1 ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುವ ಏರ್ಪೋರ್ಟ್‌ನಲ್ಲಿ ಶಿಸ್ತು ಕಾಪಾಡಲು ಆಡಳಿತ ಮಂಡಳಿ ಈ ನಿಯಮಗಳನ್ನು ತಂದಿತ್ತಾದರೂ, ಈಗ ಚಾಲಕರ ಹಿತದೃಷ್ಟಿಯಿಂದ ನಿಯಮಗಳನ್ನು ಸಡಿಲಗೊಳಿಸಿದೆ.

Must Read

error: Content is protected !!