ಹೊಸದಿಗಂತ ಡಿಜಿಟಲ್ ಡೆಸ್ಕ್
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ರಿಲೀಸ್ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅನೇಕ ಥಿಯೇಟರ್‌ಗಳಲ್ಲಿ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಹೌಸ್‌ಫುಲ್ ಬೋರ್ಡ್ ಬಿದ್ದಿದೆ.
ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿದ್ದು ಜುಲೈ 28 ರಂದು. ರಿಲೀಸ್ ಆದ ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ ಎಂದು ವರದಿಯಾಗಿದೆ.
ಸಿನಿಮಾ ಬಿಡುಗಡೆಯಾದ ಮೊದಲ ದಿನ (ಗುರುವಾರ) ಸುಮಾರು 33-35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ (ಶುಕ್ರವಾರ) 20-25 ಕೋಟಿ ರೂಪಾಯಿ, ಮೂರನೇ ದಿನ (ಶನಿವಾರ) 23-25 ಕೋಟಿ, ನಾಲ್ಕನೇ ದಿನ (ಭಾನುವಾರ) 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹೀಗಾಗಿ, ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ಯಶಸ್ವಿಯಾಗಿದೆ.
ಹಿಂದಿ ವರ್ಷನ್ ಕಲೆಕ್ಷನ್
ಸಿನಿಮಾ ಹಿಂದಿಯಲ್ಲೂ ಡಬ್ ಆಗಿ ರಿಲೀಸ್ ಆಗಿತ್ತು. ಹಿಂದಿ ವರ್ಷನ್‌ನಲ್ಲಿ ಮೊದಲ ದಿನ 1.1 ಕೋಟಿ ರೂಪಾಯಿ, ಎರಡನೇ ದಿನ (ಶುಕ್ರವಾರ) 93 ಲಕ್ಷ, ಮೂರನೇ ದಿನ (ಶನಿವಾರ) 1.52 ಕೋಟಿ, ನಾಲ್ಕನೇ ದಿನ (ಭಾನುವಾರ) 2.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ, ‘ವಿಕ್ರಾಂತ್ ರೋಣ’ ಹಿಂದಿ ವರ್ಷನ್ ನಾಲ್ಕು ದಿನಗಳಲ್ಲಿ 5.96 ಕೋಟಿ ರೂಪಾಯಿ ಬಾಚಿಕೊಂಡಿದೆ.