Monday, November 3, 2025

ಅಲ್ಲಾಹು ಅಕ್ಬರ್‌ ಎಂದು ದೇವರ ವಿಗ್ರಹಕ್ಕೆ ಚಪ್ಪಲಿಯಿಂದ ಒದ್ದು ವಿಕೃತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವ್ಯಕ್ತಿಯೊಬ್ಬ ಅಲ್ಲಾಹು ಅಕ್ಬರ್‌ ಎಂದು ಕೂಗುತ್ತಾ ಚಪ್ಪಲಿ ಸಮೇತ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಗಳನ್ನು ಎಳೆದಾಡಿ, ಚಪ್ಪಲಿಯಿಂದ ಒದ್ದು ವಿಕೃತಿ ಮೆರೆದ ಘಟನೆ ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ದೇವರ ಬೀಸನಹಳ್ಳಿಯಲ್ಲಿ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ಕಬೀರ್ ಎಂಬಾತ ವಿಕೃತಿ ಮೆರೆದ ವ್ಯಕ್ತಿ.
ಈತ ವಿಶೇಷ ಚೇತನ ಎನ್ನಲಾಗುತ್ತಿದ್ದು ಘಟನೆಗೂ ಮುನ್ನ ಕಬೀರ್ ತನ್ನ ಧರ್ಮದ ಪರ ಘೋಷಣೆಗಳನ್ನು ಕೂಗುತ್ತಾ ಬಂದಿದ್ದ. ಮೆಡಿಕಲ್ ಅಂಗಡಿ ಮುಂದೆ ಇಟ್ಟಿದ್ದ ಗಣಪತಿ ದೇವರ ಫೋಟೋಗೆ ಸ್ಟಿಕ್‌ನಿಂದ ಹೊಡೆದಿದ್ದ. ಈ ವರ್ತನೆಯನ್ನು ಸ್ಥಳೀಯರು ವಿರೋಧಿಸಿದಾಗ ಕಬೀರ್ ನೇರವಾಗಿ ಹತ್ತಿರದಲ್ಲೇ ಇದ್ದ ವೇಣುಗೋಪಾಲಸ್ವಾಮಿ ದೇವಸ್ಥಾನದತ್ತ ಓಡಿದ್ದಾನೆ.

ದೇವಸ್ಥಾನದ ಬಳಿ ಕೂಗಾಡಿ, ಕೈಯಲ್ಲಿದ್ದ ಕಲ್ಲಿನಿಂದ ಗರುಡಗಂಬಕ್ಕೆ ಹೊಡೆದಿದ್ದಾನೆ. ಬಳಿಕ ಕೈಯಲ್ಲಿ ಆಯಿಲ್ ಮಾದರಿಯ ವಸ್ತುವನ್ನು ಹಿಡಿದುಕೊಂಡು ಚಪ್ಪಲಿ ಕಾಲಲ್ಲಿಯೇ ಗರ್ಭಗುಡಿಗೆ ನುಗ್ಗಿ ದೇವರ ಮೂರ್ತಿಯನ್ನು ಎಳೆದಾಡಿ ಚಪ್ಪಲಿಯಿಂದ ಒದ್ದಿದ್ದಾನೆ.  ಕಬೀರ್‌ನ ಈ ವಿಕೃತಿಯನ್ನು ಕಂಡು ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಆತನನ್ನು ಹಿಡಿದು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ನಂತರ ಮರತ್ತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಆರೋಪಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಮರತ್ತಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ತಂದಿದ್ದ ಬಾಟಲಿ, ಚಪ್ಪಲಿ ಮತ್ತು ಕಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈವರೆಗಿನ ಮಾಹಿತಿಗಳ ಪ್ರಕಾರ ಈತ ಬಾಂಗ್ಲಾ ಮೂಲದವನಾಗಿದ್ದು ಅಕ್ರಮವಾಗಿ ನುಸುಳಿಕೊಂಡು ಬೆಂಗಳೂರಿಗೆ ಬಂದಿದ್ದಾನೆ ಎನ್ನಲಾಗುತ್ತಿದೆ.

error: Content is protected !!